

ಚಿತ್ರದುರ್ಗ: ಜನಸಂಖ್ಯೆ ಹೆಚ್ಚಳದಿಂದಾಗಿ ಬಹಳಷ್ಟು ಸಮಸ್ಯೆಗಳು ಉಲ್ಬಣಗೊಳ್ಳಲಿದ್ದು, ಅದರಲ್ಲೂ ಪರಿಸರ ಮೇಲೆ ಹೆಚ್ಚು ದುಷ್ಪಾರಿಣಾಮ ಬೀರಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಇಲಾಖೆ ಗುರುವಾರ ನಗರದ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿಯೇ ಭಾರತ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಜನಸಂಖ್ಯೆ ಸ್ಫೋಟದಿಂದ ಆಗುವ ಸಮಸ್ಯೆಗಳು ಬಹಳ ದೊಡ್ಡ ಪ್ರಮಾಣದಲ್ಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮನುಷ್ಯನ ಬೇಡಿಕೆಗಳನ್ನು ಈಡೇರಿಸಲು ಅರಣ್ಯ ನಾಶವಾಗುತ್ತಿದೆ. ಕೆರೆ-ಕಟ್ಟೆಗಳು ಒತ್ತುವರಿಯಾಗುತ್ತಿವೆ. ಜನಸಂಖ್ಯೆ ಸ್ಫೋಟದಿಂದ ಶಿಕ್ಷಣ, ವಸತಿ, ಸಾರಿಗೆ ಹಾಗೂ ಶಿಕ್ಷಣದ ಸಮಸ್ಯೆ ಹೆಚ್ಚಾಗಲಿದ್ದು, ಜನಸಂಖ್ಯೆ ನಿಯಂತ್ರಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ನೀರು ಕಲುಷಿತವಾಗುತ್ತಿದ್ದು, ಶುದ್ಧ ಕುಡಿಯುವ ನೀರು ಸಿಗದೆ ರೋಗರುಜಿನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಜಲ ಸಂಗ್ರಹಾಗಾರಗಳನ್ನು ಸ್ವಚ್ಛ ಹಾಗೂ ಸುರಕ್ಷಿತವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಮೂಲ ಸೌಕರ್ಯಗಳಿಗೆ ತೊಂದರೆ ಎದುರಾಗಲಿದೆ. ಜಿಲ್ಲೆಯ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ತಾಲೂಕುಗಳಲ್ಲಿ ಅಪ್ರಾಪ್ತೆ ಗರ್ಭಿಣಿಯರ ಪ್ರಕರಣಗಳು ವರದಿ ಆಗುತ್ತಿರುವುದು ಅಮಾನವೀಯವಾಗಿದೆ. ಬಾಲ್ಯ ವಿವಾಹ ನಿಯಂತ್ರಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದರು.
ಕಾರ‌್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉತ್ತ ಮ ಹೆರಿಗೆ ವಾರ್ಡ್ ಮತ್ತು ಉತ್ತಮ ಹೆರಿಗೆ ಶಸ್ತ್ರಚಿಕಿತ್ಸೆ ಕೊಠಡಿ ನಿರ್ವಹಣೆಗಾಗಿ ಡಾ.ರವೀಂದ್ರ, ಡಾ.ಪವಿತ್ರಾ ಹಾಗೂ ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಡಾ.ಸಾಲಿ ಮಂಜಪ್ಪ, ಡಾ.ಅಭಿನವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಥಾಕ್ಕೆ ಡಿಎಸ್ ಡಾ.ಎಸ್.ಪಿ.ರವೀಂದ್ರ ಚಾಲನೆ ನೀಡಿದರು. ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಜಿಪಂ ಸಿಪಿಒ ಸತೀಶ್‌ರೆಡ್ಡಿ, ಡಾ.ರೇಖಾ, ಡಾ.ಎನ್.ಕಾಶಿ, ಡಾ.ನಾಗರಾಜ್, ಕೃಷ್ಣನಾಯ್ಕ, ಗೌರಮ್ಮ, ಎನ್.ಎಸ್.ಮಂಜುನಾಥ್ ಮತ್ತಿತರರು ಇದ್ದರು.