

ಚಿತ್ರದುರ್ಗ: ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಿದಲ್ಲಿ ಆಯೋಗಕ್ಕೆ ನಿಖರ ಮಾಹಿತಿ ನೀಡಲಾಗುವುದು. ಅದಕ್ಕೆ ಒಪ್ಪದಿದ್ದರೆ, ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಿಸ್ಸೆ ತಿಳಿಸಿದರು.
ಭಾವಸಾರ ಕಲ್ಯಾಣ ಮಂಟಪದಲ್ಲಿ ಭಾನುವಾರ ಭಾವಸಾರ ಕ್ಷತ್ರಿಯ ಸಮಾಜದಿಂದ ಹಮ್ಮಿಕೊಂಡಿದ್ದ ಜಾತಿಗಣತಿ ಕುರಿತ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು.
ಜಯಪ್ರಕಾಶ್ ಅವರ ಆಯೋಗ ನೀಡಿದ ವರದಿಯಲ್ಲಿ ರಾಜ್ಯದಲ್ಲಿ ನಮ್ಮ ಸಮುದಾಯ ಕೇವಲ 1.08 ಲಕ್ಷ ಜನಸಂಖ್ಯೆ ಹೊಂದಿರುವುದಾಗಿ ತಿಳಿಸಿದೆ. ಆದರೆ, ಈ ಮಾಹಿತಿ ತಪ್ಪು. ಬೆಂಗಳೂರು ಒಂದರಲ್ಲೇ 2ಲಕ್ಷ ಮಂದಿ ಸಮುದಾಯವರಿದ್ದಾರೆ. ಸಮೀಕ್ಷೆ ಸರಿಯಾಗಿ ಮಾಡಿಲ್ಲ ಎಂದು ದೂರಿದರು.
ನಮ್ಮ ಸಮಾಜದವರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕಡಿಮೆ ತೋರಿಸಿರುವುದು ಸರಿಯಲ್ಲ. ಈ ಕುರಿತು ಆಯೋಗಕ್ಕೆ ಮನವರಿಕೆ ಮಾತ್ರವಲ್ಲ. ನಿಖರ ಅಂಕಿ-ಅಂಶ ಪಡೆದು ದಾಖಲೆ ಸಮೇತ ನೀಡಲು ಜಿಲ್ಲಾವಾರು ಪ್ರವಾಸ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಮುದಾಯದವರ ಸಹಕಾರ ಕೂಡ ಮುಖ್ಯ ಎಂದರು.
ಇದಲ್ಲದೆ, ಮಾತೃ ಭಾಷೆಯಲ್ಲಿ ಮರಾಠಿ ಎಂದು ನಮೂದಿಸಲಾಗಿದೆ. ಇದರಿಂದ ನಮ್ಮನ್ನು ಆ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿಯೂ ಸಂಖ್ಯೆ ಕ್ಷೀಣಿಸಿದೆ. ಆಗಿರುವ ತಪ್ಪನ್ನು ಈಗಲೇ ಸರಿಪಡಿಸದಿದ್ದರೆ, ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗುವುದಿಲ್ಲ ಎಂದು ಎಚ್ಚರಿಸಿದರು.
ಗಣತಿ ಕಾರ್ಯದಲ್ಲಿ ಸರ್ಕಾರ ದರ್ಜಿ, ಭಾವಸಾರ ಸೇರಿ ಇನ್ನಿತರೆ ಹೆಸರುಗಳನ್ನು ನಮೂದಿಸಿದೆ. ಆದರೆ, ದರ್ಜಿ ಎಂಬುದು ಸಮುದಾಯದ ಕುಲಕಸುಬು. ಆದ್ದರಿಂದ ಜಾತಿ ಕಾಲಂ ಅಲ್ಲಿ ಭಾವಸಾರ ಎಂದೇ ತಿದ್ದುಪಡಿಯಾಗಬೇಕಿದೆ. ಇದಕ್ಕಾಗಿ ಜಾಗೃತರಾಗಿ ಹೋರಾಡೋಣ. ಇಲ್ಲದಿದ್ದರೆ, ಮುಂದಿನ ಪೀಳಿಗೆಗೆ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಸಮಾಜದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಮಾತನಾಡಿ, ಸಮುದಾಯದವರು ಶಿಕ್ಷಣ, ಅದಕ್ಕೆ ತಕ್ಕಂಕ್ಕೆ ಉದ್ಯೋಗ ಪಡೆಯಲು ಮೀಸಲಾತಿ ಅನಿವಾರ್ಯವಾಗಿದೆ. ಹೀಗಾಗಿ ನಿಖರ ಮಾಹಿತಿ ನೀಡಬೇಕಿದೆ ಎಂದು ಹೇಳಿದರು.
ಮುಖಂಡರಾದ ಆರ್.ಎಂ. ಶ್ಯಾಮ್ ಮುಸುಳೆ, ಸತ್ಯನಾರಾಯಣ ಅಟ್ಟಕ್ಕರ್, ಸೀತಾರಾಮ್ ರಂಗದೊಳ್, ಅಶೋಕ್, ಕಿರಣ್, ಆನಂದಕುಮಾರ್, ನಾಗರಾಜ್ ಬೇದ್ರೆ, ಶ್ರೀನಾಥ್ ಬೇದ್ರೆ, ಶ್ರೀಧರ್ ಗುಜ್ಜರ್, ರಾಜೇಶ್ ಬೇದ್ರೆ, ಬಾಲಕೃಷ್ಣ ಗುಜ್ಜರ್, ನಟರಾಜ್ ಕುಂಟೆ ಇತರರಿದ್ದರು.