

ಮೈಸೂರು: ಪ್ರತಿ ಜಾತಿಯ ಜನಸಂಖ್ಯಾ ಆಧಾರಿತ ಮೀಸಲಾತಿ ಜಾರಿಗೆ ಇದೀಗ ಕಾಲ ಸೂಕ್ತವಾಗಿದೆ ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಪ್ರತಿಪಾದಿಸಿದರು.
ವಿಚಾರವಾದಿ ಬಳಗದ ವತಿಯಿಂದ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಹರೀಶ್‌ಕುಮಾರ್ ಅವರ ‘ಸಿದ್ದರಾಮಯ್ಯ 75’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೂ ಚರ್ಚೆ ಆಗಬೇಕು. ಬಳಿಕ ಪಕ್ಷದ ನಿಲುವು ಪ್ರಕಟಿಸಬೇಕು ಎಂದರು.
ಆರ್ಥಿಕ ದುರ್ಬಲ ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಸಂವಿಧಾನದ 103ನೇ ತಿದ್ದುಪಡಿಯನ್ನು ವಾಪಸ್ ಪಡೆದುಕೊಳ್ಳಬೇಕು. ಈ ಕುರಿತು ಕಾಂಗ್ರೆಸ್ ಹೋರಾಟ ಮಾಡಬೇಕು. ಈ ಮೀಸಲಾತಿ ಜಾರಿಯಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ತಿದ್ದುಪಡಿಯನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿಯನ್ನು ಕಾಂಗ್ರೆಸ್ ವತಿಯಿಂದಲೇ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ರಾಷ್ಟ್ರದ ಎಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಮೀಸಲಾತಿ ಇದ್ದರೂ ನ್ಯಾಯಾಂಗದಲ್ಲಿ ಮಾತ್ರ ಮೀಸಲಾತಿ ಇಲ್ಲ. ಹೀಗಾಗಿ ಅಲ್ಲಿಯೂ ಮೀಸಲಾತಿ ತರಲು ಕಾಂಗ್ರೆಸ್ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಸಿದ್ದರಾಮಯ್ಯ ಅವರಿಗೆ ಮುಂದಿನ ಮುಖ್ಯಮಂತ್ರಿ ಆಗಬೇಕೆಂಬ ಅಭಿಲಾಷೆ ಇದೆ ಎಂದು ಹೇಳಿದಾಗ ಸಭಾಂಗಣದಲ್ಲಿ ಚಪ್ಪಾಳೆ, ಜಯಘೋಷ ಮೊಳಗಿತು. ಈ ನಡುವೆ, ಮಾತು ಮುಂದುವರಿಸಿದ ರವಿವರ್ಮಕುಮಾರ್, ಮುಂದಿನ ಸಿಎಂ ಅಭ್ಯರ್ಥಿ ಕುರಿತು ವಿಧಾನಸಭೆ ಚುನಾವಣೆ ಮುನ್ನವೇ ಕಾಂಗ್ರೆಸ್ ತನ್ನ ನಿಲುವು ಪ್ರಕಟಿಸಬೇಕು. ಇದರಿಂದ ಮತಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.
ಆಳುವ ಪಕ್ಷಗಳಲ್ಲಿಯೇ ಆಂತರಿಕ ಪ್ರಜಾಪ್ರಭುತ್ವ ಸತ್ತುಹೋಗಿದ್ದು, ಸಂಸತ್, ವಿಧಾನಮಂಡಲದಲ್ಲಿ ಪ್ರಜಾಪ್ರಭುತ್ವ, ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯುವ ಚರ್ಚೆ ಗಗನ ಕುಸುಮವೇ ಸರಿ. ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಮೀಸಲಾತಿಯನ್ನು ಸಂಸತ್‌ನಲ್ಲಿ ಚರ್ಚೆ ಮಾಡದೆ ಜಾರಿಗೊಳಿಸಿರುವುದೇ ಇದಕ್ಕೆ ಸಾಕ್ಷಿ ಎಂದರು.
ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣದಲ್ಲಿ ಹಸಿವಿನಿಂದ ಜನರು ಸಾಯುತ್ತಿದ್ದರು. ಆದರೆ, ಸಿದ್ದರಾಮಯ್ಯ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಿಂದ ನಮ್ಮ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಸಾಯಲಿಲ್ಲ. ಬಾಲಕಾರ್ಮಿಕ ಪದ್ಧತಿ ಕಡಿಮೆಯಾಯಿತು. ಮಕ್ಕಳು ಮರಳಿ ಶಾಲೆಗೆ ಬಂದು ಶಿಕ್ಷಣ ಪಡೆಯಲು ಹೆಚ್ಚಿನ ಅನುಕೂಲವಾಯಿತು. ಗುಟ್ಕಾ ನಿಷೇಧ ಮಾಡಿದ್ದು ಸಿದ್ದರಾಮಯ್ಯ ಸಾಧನೆಯಾಗಿದೆ. ಗುಟ್ಕಾ ನಿಷೇಧದಿಂದ ಲಕ್ಷಾಂತರ ಜನರು ಕ್ಯಾನ್ಸರ್‌ನಂತಹ ಮಾರಕ ರೋಗದಿಂದ ಬಚಾವಾದರು. ಕೆಲ ಜಿಲ್ಲೆಗಳಲ್ಲಿ ಇದ್ದಂತಹ ಸೇಂದಿ ಮಾರಾಟವನ್ನು ನಿಷೇಧ ಮಾಡಿದ್ದು ಸಹ ಸಿದ್ದರಾಮಯ್ಯ ಹೆಗ್ಗಳಿಕೆಯಾಗಿದೆ ಎಂದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬ್ರಾಹ್ಮಣರ ಬ್ರಾಹ್ಮಣ್ಯಕ್ಕಿಂತ ಶೂದ್ರರ ಬ್ರಾಹ್ಮಣ್ಯ ಹೆಚ್ಚು ಅಪಾಯಕಾರಿ. ಶೂದ್ರರ ಬ್ರಾಹ್ಮಣ್ಯದ ವಿರುದ್ಧ ಪ್ರತಿಭಟಿಸದಿದ್ದರೆ ಮಾರಕವಾಗಲಿದೆ. ಸರ್ವಾಧಿಕಾರಿ ಧೋರಣೆಯ ಆಡಳಿತ ಮುನ್ನೆಲೆಗೆ ಬಂದಿದೆ. ಧರ್ಮ, ಸೂಕ್ಷ್ಮವಿಚಾರಗಳನ್ನು ಮುಂಚೂಣಿಗೆ ತರಲಾಗುತ್ತಿದೆ. ಇದನ್ನು ತಡೆಯಲು ಮುಂದಿನ ವಿಧಾನಸಭೆ ಚುನಾವಣೆ ಅಳಿವು ಉಳಿವಿನ ಹೋರಾಟವಾಗಿದೆ ಎಂದರು.
ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣಿಗಳು ಸಿದ್ದರಾಮಯ್ಯ ವಿರುದ್ಧ ಮುಗಿಬೀಳುವ ಮೂಲಕ ಅವರ ಧ್ವನಿ ಅಡಗಿಸಲು ಯತ್ನಿಸಿದ್ದಾರೆ. ಇದು ಜನರ ಧ್ವನಿಯನ್ನೂ ಸಹ ಅಡಗಿಸುವ ಹುನ್ನಾರವಾಗಿದೆ. ಸುಮ್ಮನೆ ಇದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಕೋಮುವಾದವು ಸಮತಾವಾದವನ್ನು ಹಿಮ್ಮೆಟ್ಟಿಸುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ನಾಯಕತ್ವವನ್ನು ಬಲಪಡಿಸಬೇಕಾಗಿದೆ ಎಂದರು.
ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಈಗಿರುವ ಎಲ್ಲ ಮೀಸಲಾತಿಯೂ ರದ್ದಾಗಲಿದೆ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಸಂವಿಧಾನದ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸಹ ಈ ರೀತಿ ಸುಳಿವು ಇದೆ. ಬಿಜೆಪಿ ಸಂವಿಧಾನವನ್ನು ಬದಲಾವಣೆ ಮಾಡಲ್ಲ. ಬದಲಿಗೆ ಅದನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಭ್ರಷ್ಟಾಚಾರಿಯಾಗಿದ್ದರೆ ಇಷ್ಟೊತ್ತಿಗೆ ಬಿಜೆಪಿಯವರು ಅವರನ್ನು ರಾಜಕೀಯವಾಗಿ ಮುಗಿಸಿಬಿಡುತ್ತಿದ್ದರು. ರೀಡೂ, ವಾಚ್ ಪ್ರಕರಣ ಬಿಟ್ಟರೆ ಭ್ರಷ್ಟಾಚಾರ ಆರೋಪಗಳು ಸಿದ್ದರಾಮಯ್ಯ ಮೇಲಿಲ್ಲ. ಭ್ರಷ್ಟಾಚಾರ ಮಾಡಿದ್ದೇ ಆಗಿದ್ದರೆ ಲಾಲು ಪ್ರಸಾದ್ ಯಾದವ್ ಅವರಂತೆ ಜೈಲಿನಲ್ಲಿರಬೇಕಿತ್ತು ಎಂದರು.
ಕಾಂಗ್ರೆಸ್‌ನ ಮುಖಂಡರಿಗೆ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ಆದರೆ, ಸಿದ್ದರಾಮಯ್ಯರಿಗೆ ಇದೆ. ಹೀಗಾಗಿ, ಅವರ ಸಿದ್ಧಾಂತ, ಪಕ್ಷದ ಮೂಲ ಸಿದ್ಧಾಂತಕ್ಕೆ ಹೊಂದಿಕೆಯಾಗುತ್ತದೆ. ನೆಹರೂ ಹಾಗೂ ಸಿದ್ದರಾಮಯ್ಯ ಅವರ ಸಿದ್ಧಾಂತಗಳೆರಡೂ ಒಂದೇ. ಸಿದ್ದರಾಮಯ್ಯ ಮೂಲ ಕಾಂಗ್ರೆಸ್‌ನವರಲ್ಲ, ಆದರೆ, ಅವರು ಕಾಂಗ್ರೆಸ್ ಸಿದ್ಧಾಂತದ ಮೂಲದವರು ಎಂದು ವಿಶ್ಲೇಷಿಸಿದರು.
ಚಿಂತಕ ಪ.ಮಲ್ಲೇಶ್ ಮಾತನಾಡಿ, ಅನ್ಯಾಯ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಯಾರೂ ಪ್ರಶ್ನಿಸುತ್ತಿಲ್ಲ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಯುವಕರು ಬೀದಿಗಿಳಿಯಬೇಕಿತ್ತು. ಅವರು ಏನು ಮಾಡುತ್ತಿಲ್ಲ. ದಿಕ್ಕೆ ಇಲ್ಲದ ಸಮಾಜವನ್ನು ಪ್ರಧಾನಿ ಕಟ್ಟುತ್ತಿದ್ದಾರೆ. ಮಕ್ಕಳು, ಯುವಕರಿಗೆ ಭವಿಷ್ಯವೇ ಇಲ್ಲದಾಗಿದೆ ಎಂದು ಹರಿಹಾಯ್ದರು.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಲೇಖಕ ಡಾ.ಹರೀಶ್‌ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಇನ್ನಿತರರು ಇದ್ದರು.