ಜನವಾದಿ ಮಹಿಳಾ ಸಂಘದಿಂದ ಪ್ರತಿಭಟನೆ

SRP_31-01jpg
Published on

ಶ್ರೀರಂಗಪಟ್ಟಣ: ಹೆಣ್ಣಿನ ಮೇಲಿನ ಅತ್ಯಾಚಾರ, ಶೋಷಣೆ, ದೌರ್ಜನ್ಯವನ್ನು ಕೊನೆಗಾಣಿಸಬೇಕು. ಧರ್ಮ ಹಾಗೂ ಜಾತಿ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯಗಳು ನಿಲ್ಲಬೇಕು ಎಂದು ಆಗ್ರಹಿಸಿ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಜನವಾದಿ ಮಹಿಳಾ ಸಂಘದಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನಾನಿರತ ಮಹಿಳೆಯರು ತಮ್ಮ ವಿವಿಧ 13 ಬೇಡಿಕೆಗಳ ಸಂಕೇತವಾಗಿ 13 ಧ್ವಜಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಸಂಘದ ಜಿಲ್ಲಾ ಕಾರ್ಯದರ್ಶಿ ಸುಶೀಲಾ ಮಾತನಾಡಿ, ಸಂಘಟನೆ ವತಿಯಿಂದ ಜ.6ರಿಂದ 9ರ ರವರೆಗೆ ಕೇರಳದ ತಿರುವನಂತಪುರಂನಲ್ಲಿ 13ನೇ ಅಖಿಲ ಭಾರತ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ ಖಂಡಿಸಿ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ, ಸಮಾನ ಸಮಾಜ ನಿರ್ಮಾಣ ಹಾಗೂ ಸಾಮಾನ್ಯರಿಗೂ ರಾಜಕೀಯ ಪ್ರಜ್ಞೆ ಮೂಡಿಸಲು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದರ ಭಾಗವಾಗಿ ಎಲ್ಲ ಹೋಬಳಿ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಕೇಂದ್ರಗಳಲ್ಲೂ ಶನಿವಾರ 13 ಧ್ವಜಗಳನ್ನು ಹಾರಿಸುವುದರ ಮುಖೇನ ‘ಈ ದಿನದ ಸಂಜೆ, ಈ ರಸ್ತೆ ನಮ್ಮದು, ಈ ರಾತ್ರಿ ನಮ್ಮದು’ ಎಂಬ ಘೋಷಣೆಯೊಂದಿಗೆ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ದೌರ್ಜನ್ಯಗಳಿಗೆ ಅಂತ್ಯ ಹಾಡಿ ನೆಮ್ಮದಿ ನಾಳೆಗಾಗಿ ರಾಷ್ಟ್ರೀಯ ಸಮ್ಮೇಳನಕ್ಕೆ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ಜನವಾದಿ ಸಂಘಟನೆ ತಾಲೂಕು ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಲಕ್ಷ್ಮಮ, ಸಿದ್ದಮ್ಮ, ಗೌರಮ್ಮ, ಸಾವಿತ್ರಮ್ಮ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net