

ಹಾಸನ: ಮುಡಾ ವಿಚಾರ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್‌ಗೆ ಧಕ್ಕೆ ತರಲು ಬಿಜೆಪಿ ಹಾಗು ಜೆಡಿಎಸ್‌ನವರು ಪ್ರಯತ್ನಿಸಿದರು. ಜನರು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒಗ್ಗಟ್ಟಿನ ಪ್ರಯತ್ನ ಗೆಲುವು ತಂದುಕೊಟ್ಟಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಹಾಗು ಅಭಿವೃದ್ಧಿ ಕಾಮಗಾರಿಗಳ ಕುರಿತು ಅಪಪ್ರಚಾರ ಮಾಡಿದ ಪ್ರತಿಪಕ್ಷಗಳಿಗೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆಂದರು.
ಸ್ವಾರ್ಥಕ್ಕಾಗಿ ಇಳಿವಯಸ್ಸಿನಲ್ಲಿ ದೇವೇಗೌಡರಿಗೆ ಹಿಂಸೆ ಕೊಟ್ಟು ಬೀದಿಗೆ ತಂದು ನಿಲ್ಲಿಸಿದ್ದು ಖಂಡನೀಯ. ರಾಜಕಾರಣಕ್ಕಾಗಿ ಆರೋಗ್ಯ ಸರಿಯಿಲ್ಲದ ಮುತ್ಸದ್ದಿಗೆ ತೊಂದರೆ ನೀಡಬಾರದಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದರು.
ಚನ್ನಪಟ್ಟಣ ಕ್ಷೇತ್ರ ಗೆಲ್ಲಲೇಬೇಕೆಂದು ಬಿಜೆಪಿ-ಜೆಡಿಎಸ್‌ನವರು ದೊಡ್ಡ ಪ್ರಮಾದ ಎಸಗಿದರು. ಹಿರಿಯ ನಾಯಕನಿಗೆ ತೊಂದರೆ ಕೊಡಬಾರದಿತ್ತು. ನಾನೇನಾದರೂ ಅವರ ಮಗನಾಗಿದ್ದರೆ ನಮ್ಮ ಸ್ವಾರ್ಥಕ್ಕೆ ಖಂಡಿತ ಬಳಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲೇ ಇದ್ದು ಆಶಿರ್ವಾದ ಮಾಡಿ ಅಂತಿದ್ದೆ. ದೇವೇಗೌಡರ ಮೇಲೆ ನನಗೆ ಅಪಾರ ಗೌರವವಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೆ ತಿರುಗೇಟು ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಶೀಘ್ರದಲ್ಲೇ ಮಾಡಲಾಗುವುದು. ಹುಡಾ ಅಧ್ಯಕ್ಷರ ಆಯ್ಕೆಯಾಗಬೇಕಿದ್ದು ಆದಷ್ಟು ಬೇಗ ಸ್ಥಾನ ಭರ್ತಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಟಿಯಲ್ಲಿ ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ, ಎನ್.ಎಸ್.ಭೋಸರಾಜು, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಮಾಜಿ ಸಚಿವ ಬಿ.ಶಿವಾಮ್, ಮೈಸೂರಿನ ಲಕ್ಷ್ಮಣ್, ಶಿವಣ್ಣ ಇದ್ದರು.