ಜನರಿಲ್ಲದ ಜನ ಸಂಪರ್ಕ ಸಭೆ

19rajesh6
Published on

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಹೇಳಿಕೊಳ್ಳಲು ಕರೆಯುವ ಜನಸಂಪರ್ಕ ಸಭೆಯಲ್ಲಿ ಜನರೇ ಇರಲಿಲ್ಲ.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಜನರಿಗಿಂತಲೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಹೆಚ್ಚಾಗಿದ್ದರು. ಆಗಾಗಿ ಸೆಸ್ಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಲವು ಮುಖಂಡರು, ಜನಸಂಪರ್ಕ ಸಭೆ ಕುರಿತು ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವುದಿಲ್ಲ ಎಂದು ಕಿಡಿಕಾರಿದರು. ನಗರದ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ವಿದ್ಯುತ್ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಅಂತವರಿಗೆ ಜನಸಂಪರ್ಕ ಸಭೆಯ ಕುರಿತು ಅಗತ್ಯ ಮಾಹಿತಿ ನೀಡಬೇಕು. ಸಾಧ್ಯವಾದರೇ ಸಭೆಯ ಹಿಂದಿನ ದಿನ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಪ್ರದೀಪ್ ಪ್ರತಿಕ್ರಿಯಿಸಿ, ಜನಸಂಪರ್ಕ ಸಭೆ ಕುರಿತು ಪತ್ರಿಕಾ ಪ್ರಕಟಣೆ ನೀಡಲಾಗುತ್ತಿದೆ. ಸಾಮಾಜಿಕ ಜಾತಾಣಗಳು ಮೂಲಕವೂ ಮಾಹಿತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಜನರಿಗೆ ಸಭೆಯ ಕುರಿತು ಮಾಹಿತಿ ತಲುಪುವಂತೆ ಕ್ರಮವಹಿಸಲಾಗುವುದು ಎಂದರು. ಸಭೆಯಲ್ಲಿ ಸೆಸ್ಕ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಮಹೇಶ್, ಎಇ ನಾಗೇಂದ್ರ, ಸಹಾಯಕ ಲೆಕ್ಕಾಧಿಕಾರಿ ಮಂಗಳಾ ಹಾಗೂ ಇತರರು ಹಾಜರಿದ್ದರು.

ಕರೆಂಟ್ ತೆಗೆಯುವುದರಿಂದ ಕಳ್ಳತನ:

ನಗರದ ರಾಮಸಮುದ್ರ ಮತ್ತು ಇನ್ನಿತರೆ ಬಡಾವಣೆಗಳಲ್ಲಿ ರಾತ್ರಿಯ ವೇಳೆಯಲ್ಲಿ ಕರೆಂಟ್ ತೆಗೆಯುವುದರಿಂದ ಕಳ್ಳತನಗಳು ಹೆಚ್ಚಾಗಿದೆ. ರಾಮಸಮುದ್ರ ಬಡಾವಣೆಯ ತಿಬ್ಬಳ್ಳಿಕಟ್ಟೆ ಬಳಿಯಲ್ಲಿ ಪರಿವರ್ತಕ ಅಳವಡಿಸಿ 5 ತಿಂಗಳಾಗಿದ್ದರೂ, ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ವಿದ್ಯುತ್ ಕಂಬ ಸಂಪೂರ್ಣವಾಗಿ ಬಾಗಿದ್ದು, ಅನಾಹುತಕ್ಕೆ ಎಡಮಾಡಿಕೊಡುತ್ತಿದೆ. ರಾಮಸಮುದ್ರ ಜೆಇ ಮಂಜು ಎಂಬುವವರ ಮೇಲೆ ಸಾಕಷ್ಟು ದೂರುಗಳಿದ್ದು, ಅವರ ಮೇಲೆ ಕ್ರಮಕೈಗೊಂಡಿಲ್ಲ ಎಂದು ಮುಖಂಡ ನಾಗರಾಜು ದೂರಿದರು. ರೈತ ಮುಖಂಡ ಹಾಲಿನ ನಾಗರಾಜು ಮಾತನಾಡಿ, ಗುಂಡ್ಲುಪೇಟೆ-ಚಾ.ನಗರ ರಸ್ತೆಯಲ್ಲಿ ಜಂಗಲ್ ಕಟಿಂಗ್ ಮಾಡಬೇಕು. ಮೂಡ್ಲುಪುರ ಗ್ರಾಮಕ್ಕೆ ಮತ್ತೊಂದು ಪರಿವರ್ತಕವನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು. 14 ನೇ ವಾರ್ಡ್ ನಿವಾಸಿ ಸಯ್ಯದ್ ಅಮೀರ್ ಹಮ್ಜಾ ಮಾತನಾಡಿ, ನಮ್ಮ ಬಡಾವಣೆಯಲ್ಲಿ ವಿದ್ಯುತ್ ಕಂಬದಲ್ಲಿ ತಂತಿ ಜೋತುಬಿದ್ದಿದ್ದು, ಸುಮಾರು 6 ತಿಂಗಳಿಂದ ಸರಿಪಡಿಸುವಂತೆ ದೂರು ನೀಡಿದರು ಗಮನಹರಿಸಿಲ್ಲ ಎಂದು ದೂರಿದರು.

ಸಮಸ್ಯೆ ಬಗೆಹರಿಸಲು ಒಂದೇ ವಾಹನ:

ನಗರದಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಕೇವಲ ಒಂದೇ ವಾಹನವಿದ್ದು, ಇದರಿಂದ ಸಮಸ್ಯೆಯಾಗುತ್ತಿದೆ ಎಂದು ರೈತ ಮುಖಂಡರು ದೂರಿದರು. ನಗರದಲ್ಲಿ 31 ವಾರ್ಡ್‌ಗಳಿದ್ದು, ದಿನೇದಿನೇ ಜನಸಂಖ್ಯೆ ಬೆಳೆಯುತ್ತಿದೆ. ಆಗಾಗಿ ಹೆಚ್ಚಿನ ವಾಹನ ಕಲ್ಪಿಸುವಂತೆ ಸರ್ಕಾರಕ್ಕೆ ಪತ್ರಬರೆಯುವಂತೆ ಮುಖಂಡರು ಮನವಿ ಮಾಡಿದರು. ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಮಾತನಾಡಿ, ಹಂಡ್ರಕಳ್ಳಿ ಗ್ರಾಮದ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಆವರಣದಲ್ಲೇ ವಿದ್ಯುತ್ ಕಂಬವಿದ್ದು, ತಂತಿಗಳು ಜೋತುಬಿದ್ದಿದೆ. ಮಾದಾಪುರ ಗ್ರಾಮದಲ್ಲಿ ಮೂರು ಬಾರಿ ವಿದ್ಯುತ್ ತಂತಿಗಳು ತುಂಡಾಗಿದ್ದರೂ, ಅದನ್ನು ಬದಲಾಯಿಸಿಲ್ಲ ಎಂದು ದೂರಿದರು. ಸೋಮವಾರಪೇಟೆ ಬಡಾವಣೆಯ ಸುರೇಶ್ ಮಾತನಾಡಿ, ನಮ್ಮ ಮನೆಯ ಸಮೀಪದಲ್ಲೇ ಕಬ್ಬಣದ ವಿದ್ಯುತ್ ಕಂಬ ಬಾಗಿದ್ದು, ಅದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಜನಸಂಪರ್ಕ ಸಭೆ ಕುರಿತು ಜನರಿಗೆ ಸರಿಯಾದ ಮಾಹಿತಿ ನೀಡದೆ, ಜನರಿಲ್ಲದ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ನೀಡುವ ದೂರುಗಳಿಗೆ ತ್ವರಿತವಾಗಿ ಸ್ಪಂದನೆ ಮಾಡಬೇಕು.

-ಮಹೇಶ್, ತಾಲೂಕು ಅಧ್ಯಕ್ಷ, ಭಾರತೀಯ ಕಿಸಾನ್ ಸಂಘ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net