

ಮೈಸೂರು: ರಕ್ತದಾನದ ಬಗ್ಗೆ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ರಕ್ತದ ಮಹತ್ವ ತಿಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅಭಿಪ್ರಾಯಪಟ್ಟರು.
ರೋಟರಿ ಹೆರಿಟೇಜ್ ಮೈಸೂರು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮೈಸೂರು ಜಿಲ್ಲಾ ಘಟಕ, ಜಯದೇವ ಹೃದ್ರೋಗ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ ಹಾಗೂ ಅಪೋಲೋ ಆಸ್ಪತ್ರೆಯಿಂದ ನಗರದ ರೋಟರಿ ಪಶ್ಚಿಮ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಮಾಡಿದರೆ ಏನಾಗುವುದೋ ಎಂಬ ಭಯ ಜನರಲ್ಲಿ ಇದೆ ಅದನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು. ರಕ್ತದಾನದ ಬಗ್ಗೆ ಯುವಕರನ್ನು ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.
ಮನುಷ್ಯ ಈ ಭೂಮಿ ಮೇಲೆ ಹುಟ್ಟಿದ ಮೇಲೆ ತನ್ನ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಬೇಕು. ಆಗಮಾತ್ರ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಜನರಲ್ಲಿರುವ ಕಲ್ಮಶಗಳನ್ನು ಶುಚಿಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.
ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ. ಆರೋಗ್ಯವಂತ ಮನುಷ್ಯ ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಅದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಪುನೀತ್ ರಾಜ್‌ಕುಮಾರ್ ನಿಧನರಾದ ನಂತರ ಅವರ ಕಣ್ಣುಗಳನ್ನು ದಾನ ಮಾಡಿದರು. ಅವರಿಂದ ಪ್ರೇರೇಪಿತರಾದವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇತ್ತೀಚೆಗೆ ಅಂಗಾಂಗ ದಾನ, ದೇಹದಾನಗಳನ್ನು ಹೆಚ್ಚಾಗಿ ಮಾಡುತ್ತಿದ್ದಾರೆ. ಹಲವಾರು ವೈದ್ಯರು ಸಹ ದೇಹದಾನ ಮಾಡಿದ್ದಾರೆ ಎಂದು ಹೇಳಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ದಕ್ಷಿಣ ವಲಯದ ಪೊಲೀಸ್ ಅಧೀಕ್ಷಕಿ ಡಾ. ಬಿ.ಟಿ.ಕವಿತಾ, ಸಂಸ್ಥೆಯ ಆರ್. ನಾಗಶಯನ, ಡಾ.ರಶ್ಮಿ, ಕೆ. ಮಂಜುನಾಥ್, ರಾಜಶೇಖರ ಕದಂಬ, ವೆಂಕಟೇಶ್, ಮಾಜಿ ಸೈನಿಕರ ಸಂಘದ ಕೆ.ಪಿ.ದಿವಾಕರ್, ಪದಾಧಿಕಾರಿಗಳಾದ ಸಿ. ಜಗದೀಶ್, ಎಂ.ಪಿ. ಪ್ರಭಾಕರ್, ಜಿ.ಎಂ. ಸುರೇಶ್, ನಂಜುಂಡಸ್ವಾಮಿ, ಗೋಪಾಲಕೃಷ್ಣ ಇತರರು ಇದ್ದರು.