

ಕೊಪ್ಪಳ: ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿದವರಿಂದ ಉತ್ತಮ ಕಾರ್ಯ ಸಾಧ್ಯ. ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಆರೋಗ್ಯ ಇಲಾಖೆ ಪಾತ್ರ ಮಹತ್ವದ್ದಾಗಿದೆ. ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ. ದಡಾರ, ರುಬೆಲ್ಲಾ, ಎಫ್‌ಬಿ, ಬಿಸಿಜಿ, ಒಪಿವಿ, ಪೆಂಟಾ, ರೋಟಾ, ಐಪಿವಿ, ಎಂಆರ್, ಜೆಇ, ಡಿಪಿಟಿ ವರ್ಧಕ, ಟಿಡಿ ಸೇರಿ ಇತರ ಲಸಿಕಾ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ಸಾಧಿಸಿ. ಮಳೆಗಾಲ ಹಿನ್ನೆಲೆ ಸೊಳ್ಳೆಗಳ ನಿಯಂತ್ರಣ ಕ್ರಮ ಕಟ್ಟುನಿಟ್ಟಾಗಿ ಜಾರಿಗೊಳಿಸಿ. ಜನರಿಗೆ ತಿಳಿವಳಿಕೆ ನೀಡಿ. ಚಿಕ್ಕ ವಯಸ್ಸಿನವರಲ್ಲಿ ಬಿಪಿ, ಶುಗರ್ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣಗಳೇನೆಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಡಿಎಚ್‌ಒ ಡಾ.ಟಿ.ಲಿಂಗರಾಜು ಮಾತನಾಡಿ, ಕೊಪ್ಪಳ ತಾಲೂಕಿನಲ್ಲಿ 86,083, ಗಂಗಾವತಿ 59,907, ಕುಷ್ಟಗಿ 61,765 ಮತ್ತು ಯಲಬುರ್ಗಾ ತಾಲೂಕಿನಲ್ಲಿ 95,895, ಒಟ್ಟು 3,03,650 ಮನೆಗಳ ಪೈಕಿ ಜುಲೈ ಮೊದಲನೇ ಪಾಕ್ಷಿಕದಲ್ಲಿ ಶೇ.92.46 ಮತ್ತು ಎರಡನೇ ಪಾಕ್ಷಿಕದಲ್ಲಿ ಶೇ.87.84 ರಷ್ಟು ಈಡೀಸ್ ಲಾರ್ವಾ ಸಮೀಕ್ಷೆ ನಡೆಸಲಾಗಿದೆ. ಇಆಸ್ಪತ್ರೆ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಇ-ಸಂಜೀವಿನಿಯಲ್ಲಿ ಶೇ.82ರಷ್ಟು ಪ್ರಗತಿ ಸಾಧಿಸಲಾಗಿದೆ. ಶೇ.88ರಷ್ಟು ಬಯೋಮೆಟ್ರಿಕ್ ಹಾಜರಾತಿ ಸಾಧಿಸಿದ್ದೇವೆ. ಜು.30ವರೆಗೆ 2432 ಜನರಿಗೆ ದೃಷ್ಟಿ ಪರೀಕ್ಷೆ ಕಣ್ಣಿನ ಶಸ್ತ್ರಚಿಕಿತ್ಸೆ ನೀಡಲಾಗಿದೆ ಎಂದರು.
ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಹಿರಿಯ ನಾಗರಿಕರಿಗೆ ಪೂರ್ಣ ಪ್ರಮಾಣದಲ್ಲಿ ಕನ್ನಡಕ ವಿತರಿಸಿ. ವಾರ್ಷಿಕ ಗುರಿಯನುಸಾರ ಶಾಲಾ ಮಕ್ಕಳ ನೇತ್ರ ತಪಾಸಣೆ ಮತ್ತು ಅವರಿಗೆ ಕನ್ನಡಕ ವಿತರಣೆ ಮಾಡುವಂತೆ ಡಿಸಿ ನಿರ್ದೇಶಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರಭಾರ ಉಪ ನಿರ್ದೇಶಕ ಗಂಗಪ್ಪ ಅರೋಲಿ, ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ. ಡಾ.ಈಶ್ವರ ಸವಡಿ, ಡಾ.ನಂದಕುಮಾರ್, ಡಾ.ರಾಮಾಂಜನೇಯ, ಡಾ.ಶಶಿಧರ ಇತರರಿದ್ದರು.