

ಚನ್ನರಾಯಪಟ್ಟಣ: ಕರೊನಾ ಸೋಂಕಿನ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಅಜೀತ್ ರೈ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಪಂ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ಸೋಂಕು ನಿಯಂತ್ರಣ, ಗ್ರಾಮಗಳ ಸ್ವಚ್ಛತೆ ಮತ್ತು ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಕರೊನಾ ಲಕ್ಷಣಗಳು ಕಂಡು ಬಂದಿಲ್ಲ, ಆದರೂ ಈ ಬಗ್ಗೆ ತಾಲೂಕಿನ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸೂಕ್ತ ಸಲಹೆ ಸೂಚನೆ ನೀಡಿದ್ದು ತಾಲೂಕಿನ ಯಾವುದೇ ಭಾಗದಲ್ಲಿ ರೋಗ ಲಕ್ಷಣದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಸಲಹೆ ನೀಡಿದರು.
ವಿಜಯಪುರ ವೃತ್ತ ನೀರಿಕ್ಷಕ ಮಲ್ಲಿಕಾರ್ಜುನ್ ಮಾತನಾಡಿ, ಜನರ ಆರೋಗ್ಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಸಾರ್ವಜನಿಕರು ಕರೊನಾ ಹರಡುವಿಕೆ ತಡೆಯಲು ಗುಂಪುಗೂಡುವುದನ್ನು ಬಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಬೂದಿಗೆರೆ ಗ್ರಾಪಂ ಅಧ್ಯಕ್ಷ ಕೆ.ಶ್ರೀನಿವಾಸ್‌ಗೌಡ, ರಾಜಸ್ವನೀರಿಕ್ಷಕರಾದ ಪ್ರಕಾಶ್,ಜನಾರ್ಧನ್, ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ್‌ಚಾರ್, ಪಿಡಿಒ ರಾಜಗೋಪಾಲ್‌ರೆಡ್ಡಿ, ಚನ್ನರಾಯಪಟ್ಟಣ ಪಿಎಸ್‌ಐ ನಂದೀಶ್, ಗ್ರಾಪಂ ಸದಸ್ಯರಾದ ಕೆ.ರಾಮಮೂರ್ತಿ, ಬಿ.ಆರ್ ಮುರುಳಿ, ಹಂದ್ರಹಳ್ಳಿ ದೊಡ್ಡನಾಗಪ್ಪ, ಸಿ.ನಟರಾಜ್, ಮುಖಂಡರಾದ ವಿ.ಅನಂತ್‌ರಾಜ್, ಕೆ.ರಮೇಶ್, ಎಂಪಿಸಿಎಸ್ ಮಾಜಿ ಅಧ್ಯಕ್ಷ ಎನ್.ಚಂದ್ರಶೇಖರ್, ಗ್ರಾಮ ಸಹಾಯಕ ಟಿ.ರವಿಕುಮಾರ್ ಮತ್ತಿತರರಿದ್ದರು.