ಜನರಿಗಿಲ್ಲ ಕೋವಿಡ್ ಆತಂಕ, ವ್ಯಾಪಾರಕ್ಕಿಲ್ಲ ಯಾವುದೇ ಭಂಗ

14 vikram 3
Published on

ಧಾರವಾಡ: ಜಿಲ್ಲೆಯಲ್ಲಿ ಕರೊನಾ ಹಾವಳಿ ಸಂಪೂರ್ಣ ಕಡಿಮೆಯಾಗಿಲ್ಲ. ಆದಾಗ್ಯೂ ಜನರು ಮಾತ್ರ ಅದನ್ನು ಲೆಕ್ಕಿಸದೆ ದೀಪಾವಳಿ ಪೂಜಾ ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ಮುಗಿಬಿದ್ದಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯ ದೀಪಾವಳಿ ಖರೀದಿ ಮಾಡುವುದು ವಿರಳ ಎಂಬ ಭಾವನೆ ವ್ಯಾಪಾರಸ್ಥರಲ್ಲಿತ್ತು. ಆದರೆ, ಎರಡು ದಿನಗಳಿಂದ ಮಾರುಕಟ್ಟೆಯತ್ತ ಆಗಮಿಸುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇಲ್ಲಿನ ಸುಭಾಷ ರಸ್ತೆ ಸಂಪೂರ್ಣ ಜನಜಂಗುಳಿಯಿಂದ ಕೂಡಿತ್ತು. ಇಲ್ಲಿ ಬಹುತೇಕ ಜನರು ಮಾಸ್ಕ್ ಇಲ್ಲದೆ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಸಾಮಾನ್ಯವಾಗಿತ್ತು.

ತರಕಾರಿ ಸಮೇತ ಹೂವು, ಹಣ್ಣು, ಸೇರಿ ಅಗತ್ಯ ವಸ್ತುಗಳ ದರ ಏರಿಕೆ ಆಗಿದ್ದರೂ, ಜನರ ಸಂಭ್ರಮಕ್ಕೆ ಅಡ್ಡಿಯಾಗಿಲ್ಲ. ಮಾರುಕಟ್ಟೆಯಲ್ಲಿ ಹೂವು, ಬಾಳೆದಿಂಡು, ಕಬ್ಬು, ಹಣ್ಣು, ಪ್ರಣತಿ, ಆಕಾಶ ಬುಟ್ಟಿ, ಬಂಗಾರದ ಆಭರಣ, ಬಟ್ಟೆ, ರ್ಕಿದಿ ಖಾತೆ ಪುಸ್ತಕಗಳ ಮಾರಾಟ ಜೋರಾಗಿ ನಡೆದಿದೆ.

ಚೆಂಡು ಹೂವು 70 ರೂ.(ಮಾರು), ಮಲ್ಲಿಗೆ 50ರೂ., ಬಾಳೆ ದಿಂಡು 2ಕ್ಕೆ 50-70 ರೂ., ಬಾಳೆ ಹಣ್ಣು 45 ರೂ. ಡಜನ್, ಸೇಬು 140ರಿಂದ 180 ರೂ. ಕೆಜಿ ಮಾರಾಟ ಮಾಡಲಾಗುತ್ತಿದೆ. ಇನ್ನು ಪಟಾಕಿ ಖರೀದಿಯಲ್ಲಿ ಬಹುತೇಕ ಜನರು ಹಿಂದೇಟು ಹಾಕುವಂತಾಗಿದೆ. ಸರ್ಕಾರ ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ನೀಡಿದ್ದರಿಂದ ಅದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಹುತೇಕರು ಪಟಾಕಿ ಖರೀದಿ ಸಹವಾಸಕ್ಕೇ ಹೋಗಿಲ್ಲ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net