

ಅಥಣಿ: ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಥಣಿ ತಾಲೂಕು ಆಸ್ಪತ್ರೆಗೆ ಖರೀದಿಸಿದ ಎರಡು ಅಂಬುಲೆನ್ಸ್‌ಗಳನ್ನು ತಾಲೂಕು ವೈದ್ಯಾಧಿಕಾರಿ ಅವರಿಗೆ ಡಿಸಿಎಂ ಲಕ್ಷ್ಮಣ ಸವದಿ ಅವರು ಭಾನುವಾರ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಬೆಳಗಾವಿ, ಮಿರಜ್, ವಿಜಯಪುರ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಲು ಬೆಳಗಾವಿ, ಮಿರಜ್ ಪಟ್ಟಣಗಳಿಂದ ಖಾಸಗಿ ಆಂಬುಲೆನ್ಸ್ ಕರೆತರುವ ಅನಿವಾರ್ಯತೆ ಇತ್ತು. ಅದಕ್ಕೆ 15, 20 ಸಾವಿರ ರೂ. ಖರ್ಚು ಆಗುತ್ತಿತ್ತು. ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಈ ತೊಂದರೆ ಗಮನದಲ್ಲಿಟ್ಟುಕೊಂಡು ನದಿ ಇಂಗಳಗಾಂವ, ಅಥಣಿ ಆಸ್ಪತ್ರೆಗಳಿಗೆ ಎರಡು ಆಂಬುಲೆನ್ಸ್ ನೀಡಲಾಗಿದೆ ಎಂದರು.
ಒಂದು ಆಂಬುಲೆನ್ಸ್ ವೆಂಟಿಲೇಟರ್ ಸೇವೆಯೊಂದಿಗೆ ಸುಸಜ್ಜಿತವಾಗಿದ್ದು, ಇನ್ನೊಂದರಲ್ಲಿ ಆಕ್ಸಿಜನ್, ಐಸಿಯು ವ್ಯವಸ್ಥೆ ಇದೆ. ಐಸಿಯು ವ್ಯವಸ್ಥೆ ಇರುವ ಆಂಬುಲೆನ್ಸ್ ತುರ್ತು ಸಂದರ್ಭದಲ್ಲಿ ಬಳಕೆಯಾಗಲಿದೆ. 2020-21ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ನಿಧಿಯನ್ನು ಖರೀದಿಗೆ ಬಳಕೆ ಮಾಡಲಾಗಿದೆ. ಅದಲ್ಲದೆ ಸಕ್ಕರೆ ಕಾಯಿಲೆ ಇರುವವರ ಚಿಕಿತ್ಸೆ ದೃಷ್ಟಿಯಿಂದ ಎರಡು ಡಯಾಲಿಸೀಸ್ ಮಷಿನ್‌ಗಳನ್ನೂ ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದರು. ಅಥಣಿ ಗಚ್ಚಿನಮಠದ ಶಿವಸಬಸವ ಸ್ವಾಮೀಜಿ, ಅಥಣಿ ಡಿವೈಎಸ್‌ಪಿ ಎಸ್.ವಿ.ಗಿರೀಶ, ಪಿಎಸ್‌ಐ ಕುಮಾರ ಹಾಡಕಾರ, ತಾಲೂಕು ವೈದ್ಯಾಧಿಕಾರಿ ಬಸಗೌಡ ಕಾಗೆ, ಆಸ್ಪತ್ರೆ ವೈದ್ಯಾಧಿಕಾರಿ ಬಿ.ಜಿ.ಕನಮಡಿ, ಡಾ.ಸಂಜಿವ ಗುಂಜಿಗಾಂವಿ, ಡಾ.ಸಿ.ಎಸ್.ಪಾಟೀಲ, ಪ್ರಕಾಶ ನರಟ್ಟಿ, ರಾಮಣ್ಣ ಧರಿಗೌಡರ, ಪ್ರದೀಪ ನಂದಗಾಂವ, ಅರುಣ ಬಾಸಿಂಗೆ, ವಿಶಾಲ ಸಗರಿ, ವಿಶ್ವನಾಥ ತೆಲಸಂಗ, ಅಕ್ಷಯ ಬುರ್ಲಿ ಇತರರು ಇದ್ದರು.