

ಲಕ್ಷ್ಮೇಶ್ವರ: ಕರೊನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಲಾಕ್ಡೌನ್ ಘೊಷಣೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮುಂಜಾಗ್ರತೆ ಕ್ರಮ, ಮನವಿ ಮಾಡುತ್ತಿದ್ದರೂ ಪಟ್ಟಣ ಸೇರಿ ತಾಲೂಕಿನ ಜನರು ಮಾತ್ರ ಇದಾವುದಕ್ಕೂ ಕ್ಯಾರೆ ಎನ್ನದೆ ಪಟ್ಟಣದ ಮಾರ್ಕೆಟ್ನಲ್ಲಿ ದಿನಸಿ, ತರಕಾರಿ ಇತರೆ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಕಳೆದ ಒಂದು ತಿಂಗಳಿಂದ ಪಟ್ಟಣದಲ್ಲಿ ಜನಸಂದಣಿ ಸೇರುವುದನ್ನು ತಡೆಯಲು ತಾಲೂಕಾಡಳಿತ ಸ್ಥಳೀಯ ಪುರಸಭೆ, ಪೊಲೀಸ್ ಸಿಬ್ಬಂದಿ ಸಹಯೋಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಬೆಳಗ್ಗೆ 6 ರಿಂದ 9 ಗಂಟೆವರೆಗೆ ಮಾತ್ರ ಮನೆಮನೆಗೆ ತೆರಳಿ ದಿನಸಿ ವ್ಯಾಪಾರ ಮತ್ತು ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಬೆಳಗ್ಗೆಯಿಂದಲೇ ಪುರಸಭೆ, ಪೊಲೀಸ್ ಸಿಬ್ಬಂದಿ ಜನಸಂದಣಿ ಸೇರುವುದನ್ನು ತಡೆಯಲು ಹರಸಾಹಸ ಪಡುತ್ತದೆ. ಆದಾಗ್ಯೂ ಬುಧವಾರ ಪಟ್ಟಣದಲ್ಲಿ ದಿನಸಿ, ತರಕಾರಿ ಖರೀದಿಸಲು ಮುಗಿ ಬಿದ್ದಿರುವುದನ್ನು ಪರಿಗಣಿಸಿದರೆ ಇಲ್ಲಿನ ಜನತೆಗೆ ಕರೊನಾ ಬಗ್ಗೆ ಯಾವುದೇ ಭಯವೇ ಇಲ್ಲ. ಸರ್ಕಾರದ ಮನವಿ, ಅಧಿಕಾರಿಗಳ ಸೇವೆ, ಸಮರ್ಪಣಾ ಮನೋಭಾವ, ಕಾನೂನು ಕ್ರಮ ಯಾವುದಕ್ಕೂ ಡೋಂಟ್ಕೇರ್ ಎನ್ನುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಗುರುವಾರ ಪಟ್ಟಣದ ಮಾರ್ಕೆಟ್ನಲ್ಲಿ ಸೇರಿದ್ದ ಜನಸ್ತೋಮದ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದ್ದಂತೆಯೇ ಸ್ವತಃ ತಹಸೀಲ್ದಾರರೇ ಲಾಟಿ ಹಿಡಿದು ಎಚ್ಚರಿಸುವ, ಬುದ್ಧಿ ಹೇಳುವ, ಜನಸಂದಣಿ ಚದುರಿಸುವ ಕಾರ್ಯಕ್ಕೆ ಮುಂದಾದರು. ತಹಸೀಲ್ದಾರರ ಸೂಚನೆ ಮೇರೆಗೆ ಪೊಲೀಸರು, ಪುರಸಭೆಯವರು ಸಾಮಾಜಿಕ ಅಂತರ ಕಾಯದ, ನಿಯಮ ಪಾಲಿಸದ ಕೆಲ ಅಂಗಡಿಗಳಿಗೆ ಬೀಗ ಹಾಕಿಸಿದರು. ವಿನಾಕಾರಣ ರಸ್ತೆಗಿಳಿದ ಬೈಕ್ ಸವಾರರಿಗೆ ಲಾಠಿ ರುಚಿ ತೋರಿಸಿದರು.
ಬೆಳಗ್ಗೆ ಮಾರ್ಕೆಟ್ಗೆ ಆಗಮಿಸಿದ್ದ ಪಟ್ಟಣದ ದಿವಾಣಿ ನ್ಯಾಯಾಧೀಶ ಎಂ.ಆರ್. ಒಡೆಯರ್ ಅವರೂ ಮಾರ್ಕೆಟ್ನಲ್ಲಿ ಸಾಮಾಜಿಕ ಅಂತರ ಇಲ್ಲದನ್ನು ಗಮನಿಸಿ ಬಟ್ಟೆ ಅಂಗಡಿಯವರಿಗೆ, ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು.
ಈ ಕುರಿತು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಪ್ರತಿಕ್ರಿಯಿಸಿ, ಸರ್ಕಾರ ಲಾಕ್ಡೌನ್ ಕೊಂಚ ಸಡಿಲಿಕೆ ಮಾಡಿ ಕೆಲ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ. ಆದಾಗ್ಯೂ ಸಾಮಾಜಿಕ ಅಂತರ ಕಾಯುವಂತೆ, ಕಾನೂನು ಮೀರದಂತೆ ನಡೆದುಕೊಳ್ಳಬೇಕೆಂದು ಸೂಚಿಸಿದೆ. ಗದಗ ಜಿಲ್ಲೆಯಲ್ಲಿ ಕೆಲ ಪಾಸಿಟಿವ್ ಪ್ರಕರಣಗಳು ಬಂದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ತಾಲೂಕಿನಲ್ಲಿ ವ್ಯಾಪಾರ ವಹಿವಾಟಿಗೆ ಜನಸಂದಣಿ ಸೇರದಂತೆ ಮತ್ತು ಸಾಮಾಜಿಕ ಅಂತರ ಕಾಯುವಂತೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಪಟ್ಟಣದ ಒಳಗೆ ಬರುವ ಸಂಪರ್ಕ ರಸ್ತೆಗಳನ್ನು ಬ್ಯಾರಿಕೇಡ್ಗಳಿಂದ ಬಂದ್ ಮಾಡಲಾಗುವುದು. ಬೈಕ್/ಕಾರ್, ಟಂಟಂ, ಆಟೋ ಒಳ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗುವುದು. ಈ ಎಲ್ಲದಕ್ಕೂ ಮಿಗಿಲಾಗಿ ಕರೊನಾ ಮಾರಿ ತಡೆಗಟ್ಟುವ ನಿಟ್ಟಿನಲ್ಲಿ ಜನರ ಸಹಕಾರ ಅಗತ್ಯವಾಗಿದೆ ಎಂದರು.