ಜನರಲ್ಲಿರಲಿ ಗುಣಮಟ್ಟ ಕೆಲಸದ ಕಾಳಜಿ

Published on

ಬಸವಕಲ್ಯಾಣ: ಸರ್ಕಾರದ ದುಡ್ಡು ಜನರದು. ಅಂತಲೇ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಜನರಲ್ಲಿ ಕಾಳಜಿ ಇರುವ ಅಗತ್ಯವಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಹುಮನಾಬಾದ್ ಮತಕ್ಷೇತ್ರದ ರಾಜೇಶ್ವರ ಗ್ರಾಮದಲ್ಲಿ ಎಸ್‌ಎಸ್‌ಡಿಬಿ ಯೋಜನೆಯಡಿ ೧೦ ಕೋಟಿ ಅನುದಾನದಲ್ಲಿ ರಾಜೇಶ್ವರ-ರಾಜೋಳಾ ರಸ್ತೆ ಸುಧಾರಣೆ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದ ಅವರು, ತೀವ್ರ ಹದಗೆಟ್ಟಿರುವ ಈ ರಸ್ತೆ ಸುಧಾರಣೆ ಮಾಡಬೇಕು ಎಂಬುದು ಜನರ ದಶಕಗಳ ಕನಸು ಇದೀಗ ಸಾಕಾರಗೊಳ್ಳುವ ಸಮಯ ಬಂದಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತಿದ್ದರೂ ಹಲವೆಡೆ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗಲೇ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಚುನಾವಣೆ ಬಂದಾಗ ಮಾತ್ರ ಪಕ್ಷ, ರಾಜಕೀಯ. ಉಳಿದ ಸಯಯದಲ್ಲಿ ಪ್ರಗತಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ರಾಜೇಶ್ವರ-ಇಸ್ಲಾಂಪುರ ರಸ್ತೆ ಕಾಮಗಾರಿ ಗುತ್ತಿಗೆದಾರ ಒಬ್ಬರಿದ್ದರೆ, ಕೆಲಸ ಮಾಡುವವರು ಮತ್ತೊಬ್ಬರು. ಈ ಬಗ್ಗೆ ಮುಖ್ಯ ಇಂಜಿನಿಯರ್ ಗಮನಕ್ಕೆ ತಂದಿದ್ದೇನೆ. ಗ್ರಾಮದಲ್ಲಿ ಹೋಳಾ ಹಬ್ಬದ ವೇಳೆ ಎತ್ತುಗಳ ಓಟದ ಸ್ಪರ್ಧೆ ನಡೆಯುವ ರಸ್ತೆ ತೀವ್ರ ಹದಗೆಟ್ಟಿದ್ದು, ಸುಧಾರಣೆ ಕೆಲಸಕ್ಕೆ ೨೫ ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ ಮಾತನಾಡಿ, ಮಾಜಿ ಶಾಸಕ ಬಿ. ನಾರಾಯಣರಾವ ಅವರಿಗೆ ಅಭಿವೃದ್ಧಿ ಕೆಲಸದ ಹಸಿವಿತ್ತು. ೨೦೧೩ರ ಚುನಾವಣೆಯಲ್ಲಿ ಸೋತರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹೀಗಾಗಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದರು ಎಂದು ಹೇಳಿದರು.

ಶ್ರೀ ಶರಣಯ್ಯ ಸ್ವಾಮೀಜಿ, ರಾಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಾಬಾಯಿ ಪ್ರಭು ಹೊನ್ನಾಳಿ, ಉಪಾಧ್ಯಕ್ಷೆ ಅನಿತಾ ಮಲ್ಲಿಕಾರ್ಜುನ ಮಾಲೆ, ರಾಜೋಳ ಗ್ರಾಪಂ ಅಧ್ಯಕ್ಷೆ ಅನುಸೂಯಾ ಮಹೇಶ, ಉಪಾಧ್ಯಕ್ಷೆ ಈಶ್ವರಬಾಯಿ, ಪ್ರಮುಖರಾದ ಅನಿಲ ಪಸಾರ್ಗಿ, ಸಂತೋಷ ಪಾಟೀಲ, ವೀರಣ್ಣಾ ಪಾಟೀಲ, ರಾಮಶೆಟ್ಟಿ ಸುಗುರ, ಬಸವರಾಜ ತಪಲಿ, ಸತೀಶ ರಂಜೇರಿ, ಮಾಣಿಕ ಘಾಂಗ್ರೆ, ಮಾಣಿಕರಾವ ಕಟ್ಟಿಮನಿ, ಶಿವಕುಮಾರ ಸ್ವಾಮಿ, ಸಿದ್ದು ಸೂಗುರೆ, ಸತೀಶ ಪಾಟೀಲ, ರಾಜಕುಮಾರ ಸಿಗಿ, ಗಿರೀಶ ತುಂಬಾ, ಗೋಪಾಲಕೃಷ್ಣ ಮೋಹಳೆ, ಅಜಿಮೋದ್ದಿನ್, ನಾಗಭೂಷಣ ಸಂಗಮ, ಜಗನಾಥ ಪಾಟೀಲ, ಮಲ್ಲಿಕಾರ್ಜುನ ಸಿಗಿ, ಗುತ್ತಿಗೆದಾರ ಅನೀಲ ರಾಠೋಡ್, ಎಇಇ ಧನರಾಜ ಚವ್ಹಾಣ್ ಇದ್ದರು. ಮುಖಂಡ ಕೇಶಪ್ಪ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಅಭಿವೃದ್ಧಿ ಕಾಮಗಾರಿಗೆ ೨೫ ಕೋಟಿ ರೂ. ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಸ್ವಪಕ್ಷದ ಶಾಸಕರ ಕ್ಷೇತ್ರಕ್ಕೆ ೨೫ ಕೋಟಿ ನೀಡಿದರೆ, ಬಿಜೆಪಿಯವರ ಕ್ಷೇತ್ರಕ್ಕೆ ೧೦ ಕೋಟಿ ಅನುದಾನ ಕೊಡಲಾಗಿದೆ. ಇದ್ದುದರಲ್ಲೇ ಎಲ್ಲರೂ ಸೇರಿ ಗುಣಮಟ್ಟದ ಕೆಲಸ ಮಾಡೋಣ.

| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ, ಹುಮನಾಬಾದ್

ಬಹುದಿನಗಳ ಬೇಡಿಕೆಯಂತೆ ಇದೀಗ ರಾಜೇಶ್ವರ-ರಾಜೋಳಾ ರಸ್ತೆ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಚರಂಡಿ ಕೆಲಸ ಸಹ ಮಾಡಬೇಕು. ರಸ್ತೆ ವಿಭಜಕ ೨೦೦-೪೦೦ ಮೀಟರ್‌ಗೆ ವಿಸ್ತರಿಸಬೇಕು.

| ಸಂತೋಷ ಸಿಗಿ ಗ್ರಾಪಂ ಸದಸ್ಯ ರಾಜೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net