

ಗೌರಿಬಿದನೂರು : ಸಾರ್ವಜನಿಕರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸದೆ ಅಡಳಿತದ ಚೌಕಟ್ಟಿನಲ್ಲಿ ತ್ವರಿತ ರೀತಿಯಲ್ಲಿ ಕೆಲಸ ಮಾಡಿಕೊಡುವಂತೆ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ನಗರದ ತಾಪಂ ಸಾಮರ್ಥ್ಯಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಯೋಜನೆಯಡಿ ಸ್ಮಶಾನ ಹದ್ದುಬಸ್ತು ಮಾಡುವುದು. ಒತ್ತುವರಿಯಾಗಿದ್ದಾರೆ ತೆರವುಗೊಳಿಸಬೇಕು, ತಡೆಗೋಡೆಗಳ ನಿರ್ಮಿಸುವ ಜತೆಗೆ ಕೆರೆಗಳ ಜಾಗ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಸಂರಕ್ಷಣೆ ಮಾಡಬೇಕೆಂದು ತಾಕೀತು ಮಾಡಿದರು.
ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿವೆ. ಮುಸುಕಿನಜೋಳ, ನೆಲಗಡೆಲೆ, ತೊಗರಿ, ರಾಗಿ ಬಿತ್ತನೆ ಬೀಜಗಳನ್ನು ಹೋಬಳಿ ಕೆಂದ್ರಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಕರೊನಾ ಪ್ರಕರಣಗಳು ಹಂತ ಹಂತವಾಗಿ ಕಡಿಮೆಯಾಗುತ್ತಿವೆ. ಒಟ್ಟು 2.15 ಲಕ್ಷ ಲಸಿಕೆ ನೀಡಬೇಕಿದ್ದು, 1.12 ಲಕ್ಷ ಮಂದಿಗೆ ಲಸಿಕೆ ವಿತರಿಸಲಾಗಿದೆ, ಸಂಭವನೀಯ ಮೂರನೇ ಅಲೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ.ಒ.ರತ್ನಮ್ಮ ವಿವರಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪರೀಕ್ಷಾ ತಜ್ಞರ ಕೊರತೆ ಹಾಗೂ ಪಶುಪಾಲನೆ ಇಲಾಖೆಯಿಂದ ಬೊಮ್ಮಪ್ಪ ದೇವಾಲಯ ಬಳಿಯ 5 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಿಸುವ ಕುರಿತು ಚರ್ಚಿಸಲಾಯಿತು.
ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾಪಂ ಇಒ ಎನ್.ಮುನಿರಾಜು, ಸಮಾಜ ಕಲ್ಯಾಣಾಧಿಕಾರಿ ಮಹದೇವಸ್ವಾಮಿ, ಪರಿಶಿಷ್ಟ ವರ್ಗಗಳ ಇಲಾಖೆ ವ್ಯವಸ್ಥಪಕ ರವಿ, ನಗರಸಭೆ ಆಯುಕ್ತ ಸತ್ಯನಾರಾಯಣ್, ಲೋಕೋಪಯೋಗಿ ಇಲಾಖೆ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆ ಆದಿನಾರಾಯಣಪ್ಪ, ಎಇಇ ಜಗದೀಶ್, ಬಿಇಒ ಶ್ರೀನಿವಾಸಮೂರ್ತಿ ಹಾಗೂ ಇತರ ಅಧಿಕಾರಿಗಳಿದ್ದರು.
ಅಧಿಕಾರಿಗಳಿಗೆ ತರಾಟೆ : ರೇಷ್ಮೆ ಇಲಾಖೆಯಲ್ಲಿನ ನರೇಗಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶಿವಶಂಕರರೆಡ್ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತೋಟಗಾರಿಕೆ ಇಲಾಖೆಯ ಯೋಜನೆಗಳ ಮಾಹಿತಿ ಕೊರೆತೆಯಿಂದ ರೈತರು ಪರದಾಡುತ್ತಿದ್ದಾರೆ ಎಂದು ಸದಸ್ಯರು ಅರೋಪಿಸಿದರು. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಸರಿಪಡಿಸುವುದಾಗಿ ಇಲಾಖೆ ಅಧಿಕಾರಿ ಅಂಜಿನಪ್ಪ ಸಭೆಗೆ ಭರವಸೆ ನೀಡಿದರು.