ಜನರನ್ನು ಒಗ್ಗೂಡಿಸುವ ಕೆಲಸವಾಗಲಿ

11
Published on

ಮೈಸೂರು: ಸಾಹಿತ್ಯ, ಕಲೆ, ನಾಟಕ ಸೇರಿದಂತೆ ವಿವಿಧ ಪ್ರದರ್ಶಕ ಕಲೆಗಳ ಮೂಲಕ ಸಮಾಜ ಮತ್ತು ಜನರನ್ನು ಒಗ್ಗೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.


ಶಾರದಾ ವಿಲಾಸ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಧ್ವನಿ ಫೌಂಡೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಬಹುಮುಖ ವಿಚಾರಧಾರೆಯನ್ನೂ ಹೊಂದಿದೆ. ವಿಭಿನ್ನ ಸಂಸ್ಕೃತಿ ದೇಶವನ್ನು ಪ್ರದರ್ಶಕ ಕಲೆಗಳ ಮೂಲಕ ಒಂದುಗೂಡಿಸಬೇಕಾಗಿದೆ ಎಂದರು.

ದೇಶದ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರವನ್ನು ಕಲೆಗಳ ಮೂಲಕ ಉಳಿಸಿಕೊಳ್ಳಬೇಕಾಗಿದೆ. ಆದರೀಗ ಜಾತಿ-ಧರ್ಮ ಹೆಸರಿನಲ್ಲಿ ಜನ ಮತ್ತು ಸಮಾಜವನ್ನು ವಿಭಜನೆ ಮಾಡಲಾಗುತ್ತಿದೆ. ಮೂಲಭೂತವಾದ ಹಾವಳಿ ಹೆಚ್ಚಾಗಿದೆ. ಈ ಉಪಟಳವನ್ನು ತಡೆಹಿಡಿದು ದೇಶದ ಸಾರ್ವಭೌಮ, ಬಹುತ್ವ, ಪ್ರಜಾತಂತ್ರ ಮತ್ತು ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸವನ್ನು ಸಂಘಟನೆಗಳು ಮಾಡಬೇಕಾಗಿದೆ ಎಂದರು.


ಬಡತನ, ಕಷ್ಟ-ನಷ್ಟ, ನೋವು-ದುಃಖವನ್ನು ಅನುಭವಿಸಿದವರು ದೇಶ ಮತ್ತು ಜಗತ್ತಿನ ಚರಿತ್ರೆಯನ್ನು ಬದಲು ಮಾಡಿದ್ದಾರೆ. ನೆರವಿನ ಹಸ್ತ ಸಿಗದೆ ಅನೇಕ ಸಂಕಷ್ಟವನ್ನು ಎದುರಿಸಿದವರು ಹೊಸ ಇತಿಹಾಸವನ್ನು ನಿರ್ಮಿಸಿರುವ ಅನೇಕ ಉದಾಹರಣೆಗಳು ದೊರೆಯುತ್ತವೆ. ಆದ್ದರಿಂದ ಕಷ್ಟದ ದಾರಿ ಶಾಶ್ವತವಲ್ಲ. ಇದು ಸಾಧನೆಗಳಿಗೆ ಮೆಟ್ಟಿಲು. ಈ ರೀತಿ ಕಷ್ಟಕಾರ್ಪಣ್ಯ ಅನುಭವಿಸಿದವರಿಂದಲೇ ಸಾಧನೆ ಸಾಧ್ಯ ಎಂದರು.


ನಿವೃತ್ತ ಪ್ರಾಧ್ಯಾಪಕ ಡಾ.ಪುರುಷೋತ್ತಮ್ ಬಿಳಿಮಲೆ, ಚಲನಚಿತ್ರ ನಟಿ ಭಾವನಾ, ಫೌಂಡೇಷನ್ ಸ್ಥಾಪಕಾಧ್ಯಕ್ಷೆ ಡಾ.ಶ್ವೇತಾ ಮಡಪ್ಪಾಡಿ ಇದ್ದರು. ಬಳಿಕ ಡಾ.ಲಕ್ಷ್ಮಣದಾಸ್ ಅವರಿಂದ ಪಂಪಾಭಿವ್ಯಕ್ತಿ ಕುರಿತು ಹರಿಕಥೆ, ಪ್ರಭು ರಾವ್ ಮತ್ತು ತಂಡದಿಂದ ಕನ್ನಡ ಗೀತೆಗಳ ಗಾಯನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net