

ಆರ್.ಕೃಷ್ಣ ಮೈಸೂರು
ಬಹುತೇಕ ಮುಚ್ಚುವ ಹಂತ ತಲುಪಿದ್ದ ಇಂದಿರಾ ಕ್ಯಾಂಟೀನ್‌ಗಳಿಗೆ ಮತ್ತೆ ಮರು ಜೀವ ಬಂದಿದೆ.
ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭಗೊಂಡಿದ್ದ ಇಂದಿರಾ ಕ್ಯಾಂಟೀನ್‌ಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೊರಗಿದ್ದವು. ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮರಳಿ ಜೀವಕಳೆ ಬಂದಿದೆ.
ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಫಲಿತಾಂಶ ಬಂದು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುತ್ತಿದ್ದಂತೆಯೇ ಸಿದ್ದರಾಮಯ್ಯ ಅಭಿಮಾನಿಗಳು, ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೋಳಿಗೆ ಊಟ ಹಾಕಿ ವಿಜಯೋತ್ಸವ ಆಚರಿಸಿದ್ದರು. ಅಲ್ಲದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ 8 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದಾಗಲೂ ನಗರ ಮಾತ್ರವಲ್ಲದೆ, ರಾಜ್ಯದ ನಾನಾ ಕಡೆ ಇರುವ ಇಂದಿರಾ ಕ್ಯಾಂಟೀನ್‌ಗಳಲ್ಲೂ ಹೋಳಿಗೆ ಹಂಚಿ ಸಂಭ್ರಮಿಸಿದ್ದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಇಂದಿರಾ ಕ್ಯಾಂಟೀನ್‌ಗಳನ್ನು ಮರು ಆರಂಭಿಸಲು ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದು, ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಅದಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮತ್ತೆ ಚಟುವಟಿಕೆ ಆರಂಭಗೊಂಡಿದ್ದು, ಜನರನ್ನು ಆಕರ್ಷಿಸಲು ಸಿದ್ಧತೆ ನಡೆಸಿದೆ.
ಒಂದು ಮಾತ್ರ ಚಾಲನೆಯಲ್ಲಿ ಇತ್ತು:
ತವರಿನವರೇ ಆದ ಸಿದ್ದರಾಮಯ್ಯ ಅವರ ಕಾಳಜಿಯಿಂದ ಮೈಸೂರು ನಗರದಲ್ಲಿ ಈ ಹಿಂದೆ ಒಟ್ಟು 11 ಇಂದಿರಾ ಕ್ಯಾಂಟೀನ್‌ಗಳು ಹಾಗೂ ಎರಡು ಅಡುಗೆ ಮಾಡುವ ಸ್ಥಳಗಳು ಇದ್ದವು. ಕಾಂಗ್ರೆಸ್ ಅವಧಿ ಮುಗಿಯುವವರೆಗೂ ಚೆನ್ನಾಗಿಯೇ ನಡೆಯುತ್ತಿದ್ದ ಕ್ಯಾಂಟೀನ್‌ಗಳು, ಬಿಜೆಪಿ ಅಧಿಕಾರಕ್ಕೆ ಬಂದಾಗ ಅನುದಾನ ಕೊರತೆಯಿಂದಾಗಿ ಕುಂಟುತ್ತ ಸಾಗಿದವು. ನಗರಪಾಲಿಕೆ ಜತೆಗೆ ಸ್ಥಳೀಯ ಆಡಳಿತವೂ ಅನುದಾನ ನೀಡಬೇಕಾಗಿದ್ದರೂ ಅನುದಾನ ಬಿಡುಗಡೆ ಆಗದಿದ್ದರಿಂದ ಒಂದೊಂದಾಗಿ ಬಂದ್ ಆಗಿದ್ದವು.
ಅಂತಿಮವಾಗಿ ಕಾಡಾ ಕಚೇರಿ ಬಳಿ ಇರುವ ಕ್ಯಾಂಟೀನ್ ಹೊರತುಪಡಿಸಿ ಉಳಿದ ಎಲ್ಲ ಕ್ಯಾಂಟೀನ್‌ಗಳು ಬಹುತೇಕ ಬಂದ್ ಆಗಿದ್ದವು. ಅಡುಗೆ ಮಾಡಲು ಲಲಿತ ಮಹಲ್ ಅರಮನೆ ಬಳಿಯ ಆಲನಹಳ್ಳಿ ಬಡಾವಣೆ, ಕುಂಬಾರಕೊಪ್ಪಲಿನ ಬಳಿ ಇದ್ದ ಕ್ಯಾಂಟೀನ್‌ಗಳು ಕುಂಟುತ್ತ ಸಾಗಿದ್ದವು.
ಇಂದಿರಾ ಕ್ಯಾಂಟೀನ್‌ಗಳು ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವವರೆಗೂ ಜನಾಕರ್ಷಣೆಯೊಂದಿಗೆ ಕಡಿಮೆ ದರದಲ್ಲಿ ಜನರ ಹಸಿವು ತಣಿಸುತ್ತಿದ್ದವು. ಆರಂಭದಲ್ಲಿ 500ಕ್ಕೂ ಹೆಚ್ಚು ಜನರು ಬರುತ್ತಿದ್ದ ಕ್ಯಾಂಟೀನ್‌ಗಳು ಅನುದಾನ ಕೊರತೆಯಿಂದ ಟೆಂಡರ್‌ದಾರರು ನಷ್ಟ ಅನುಭವಿಸಿ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದುದರಿಂದ ನೂರು ಜನರು ಸಹ ಬರುವುದು ಕಷ್ಟವಾಗಿತ್ತು.
ಪೌರಕಾರ್ಮಿಕರಿಗೂ ಊಟವಿತ್ತು
ಮುಂಜಾನೆಯೇ ಕೆಲಸಕ್ಕೆ ಬರುವ ಪೌರಕಾರ್ಮಿಕರು ಮಧ್ಯಾಹ್ನದವರೆಗೂ ಕೆಲಸ ಮಾಡುವಾಗ ಹಸಿವಿನಿಂದ ಕಂಗೆಡುತ್ತಿದ್ದರು. ಬಿಸಿಯೂಟದ ಯೋಜನೆಯಂತೆ ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಪೌರಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತ ಬಂದಿದ್ದವು. ಹೀಗಾಗಿ ಪೌರಕಾರ್ಮಿಕರಿಗೆ ನಗರದ ಇಂದಿರಾ ಕ್ಯಾಂಟೀನ್ ಮೂಲಕ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು.
ಸರ್ಕಾರದ ಸೂಚನೆಯಂತೆ ನಗರದ 65 ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿರುವ 2426 ಪೌರಕಾರ್ಮಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆಟೋಗಳಲ್ಲಿ ಊಟದ ಪೊಟ್ಟಣಗಳನ್ನು ವಾರ್ಡ್‌ಗಳಿಗೆ ತೆಗೆದುಕೊಂಡು ಹೋಗಿ ಸಂಬಂಧಪಟ್ಟ ಮೇಲುಸ್ತುವಾರಿಗಳಿಗೆ ಹಸ್ತಾಂತರಿಸಲಾಗುತ್ತಿತ್ತು. ಇದರಿಂದ ಪೌರಕಾರ್ಮಿಕರು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದರು. ಆದರೆ ಇಂದಿರಾ ಕ್ಯಾಂಟೀನ್‌ಗಳು ಬಂದ್ ಆಗಿದ್ದರಿಂದ ಯಥಾಪ್ರಕಾರ ಹಸಿವಿನಲ್ಲಿಯೇ ಪೌರಕಾರ್ಮಿಕರು ಕೆಲಸ ಮಾಡುವ ಸ್ಥಿತಿ ಉಂಟಾಗಿತ್ತು.
ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು
ಕೂಲಿಕಾರ್ಮಿಕರು, ಬಡವರು, ನಿರ್ಗತಿಕರ ಹಸಿವು ನೀಗಿಸಲು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಆರಂಭಿಸಲಾದ ಇಂದಿರಾ ಕ್ಯಾಂಟೀನ್‌ಗಳಿಗೆ ಅನುದಾನ ನೀಡದೆ ಮುಚ್ಚಲಾಗುತ್ತಿದೆ ಎಂದು ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಕ್ಯಾಂಟೀನ್‌ಗಳ ಮುಂದೆ ಸಾರ್ವಜನಿಕರಿಗೆ ಉಚಿತವಾಗಿ ಆಹಾರ ಹಂಚುವ ಮೂಲಕ, ಕ್ಯಾಂಟೀನ್‌ಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಆಗ್ರಹ ಮಾಡಿತ್ತು. ಮತ್ತೊಂದೆಡೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ ಅಟಲ್ ಕ್ಯಾಂಟೀನ್ ಹೆಸರಿನಲ್ಲಿ ಮುಂದುವರಿಸಲಾಗುವುದು ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು. ಇದು ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಇಂದಿರಾ ಕ್ಯಾಂಟೀನ್‌ಗಳನ್ನು ಪುನರಾರಂಭಿಸುವಂತೆ ಸರ್ಕಾರ ನಿರ್ದೇಶನ ನೀಡಿರುವುದರಿಂದ ನಗರಪಾಲಿಕೆಯಿಂದಲೂ ಸಿದ್ಧತೆ ಮಾಡಿಕೊಳ್ಳಲಾಗುವುದು. ನಗರಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ 11 ಕ್ಯಾಂಟೀನ್‌ಗಳು, ಎರಡು ಅಡುಗೆ ಕೋಣೆಗಳು ಇವೆ. ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು.
ಡಾ.ನಾಗರಾಜ್
ಆರೋಗ್ಯಾಧಿಕಾರಿ, ಮೈಸೂರು ನಗರಪಾಲಿಕೆ