ಜನರನ್ನು ಅಲೆದಾಡಿಸದೆ ಕೆಲಸ ಮಾಡಿಕೊಡಿ

mysore
Published on

ಮೈಸೂರು: ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಅಲೆದಾಡಿಸದೆ ತ್ವರಿತವಾಗಿ ಅವರ ಕೆಲಸ ಮಾಡಿಕೊಡಬೇಕು. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಮಾಲತೇಶ್ ಅಧಿಕಾರಿಗಳಿಗೆ ಎಚ್ಚರಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ, ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಪಿಡಿಒ ಅಧಿಕಾರಿಗಳು ಸರಿಯಾದ ಸಮಯಕ್ಕೆ ಹೋಗುತ್ತಿಲ್ಲ. ಹಲವು ಕಡತಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಯಾವುದೇ ಕಚೇರಿಯಲ್ಲಿ ಲೋಕಾಯುಕ್ತರಿಗೆ ದೂರು ನೀಡುವ ನಾಮಫಲಕ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವೊಂದು ಕಚೇರಿಗೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ಸೌಲಭ್ಯಗಳು ಇರಲ್ಲ. ಜನರು ಕುಳಿತುಕೊಳ್ಳಲು ಕುರ್ಚಿ ಇರಲ್ಲ, ನಾಮಫಲಕಗಳು ಇರಲ್ಲ. ಕೆಲವೊಂದು ಪಿಡಿಒ ಕಚೇರಿಗಳಲ್ಲಿ ಭ್ರಷ್ಟಾಚಾರ ಮೀತಿಮೀರಿ ಹೋಗಿದೆ. ಸುತ್ತಲೂ ಮಧ್ಯವರ್ತಿಗಳೇ ಕಾಣಸಿಗುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಕಾರ್ಯನಿರ್ವಹಣಾಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಸರಿಯಾದ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಬಹುತೇಕ ಅಧಿಕಾರಿಗಳು ಸಂಜೆ 5.30ರ ನಂತರ ಸಿಗುತ್ತಾರೆ. ಧನಗಳ್ಳಿಯ ಕಚೇರಿಯಲ್ಲಿ ಪಿಡಿಒ ಇರುವುದೇ ಇಲ್ಲ. ಸ್ವತಃ ನಾನೇ ಎರಡು ದಿನ ಹೋದರೂ ಸಿಗಲಿಲ್ಲ. ಫೋನ್ ಮಾಡಿದರೆ ಕಾರ್ಯದರ್ಶಿಗಳಿಗೆ ಕೊಡುತ್ತಾರೆ ಎಂದು ದೂರಿದರು.

ಪಿಡಿಒಗಳಿಗೆ ಸರ್ಕಾರದಿಂದ ಫೋನ್ ನೀಡಿದ್ದರೂ ಯಾರೂ ಬಳಸುತ್ತಿಲ್ಲ. ಸರ್ಕಾರದಿಂದ ನೀಡಿರುವ ಫೋನ್‌ಗಳನ್ನು ಬಳಕೆ ಮಾಡಬೇಕು. ಆರ್‌ಟಿಐ ಕಾರ್ಯಕರ್ತರು ಬಂದಾಗ ಹೆದರದೆ ಅವರು ಕೇಳುವ ದಾಖಲೆ ಮಾತ್ರ ನೀಡಬೇಕು. ಆದರೆ ಕೆಲವರು ಅವರನ್ನು ಕಚೇರಿಯಲ್ಲೆಲ್ಲ ಓಡಾಡಲು ಬಿಡುತ್ತಾರೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಅಶೋಕ್ ಕುಮಾರ್, ರೂಪಶ್ರೀ, ತಹಸೀಲ್ದಾರ್ ಮಹೇಶ್, ತಾಲೂಕು ಕಾರ್ಯನಿರ್ವಣಾಧಿಕಾರಿ ಸಿ.ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net