

ನಾಗಮಂಗಲ : ಚುನಾವಣೆ ವೇಳೆ ಜನರನ್ನು ಓಲೈಸಿಕೊಳ್ಳಲು ಇತರ ಪಕ್ಷಗಳ ನಾಯಕರು ಒಂದೊಂದು ರೀತಿಯ ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಆದರೆ ಜನರ ನಿಜವಾದ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುವುದು ಕಾಂಗ್ರೆಸ್ ಮಾತ್ರ ಎಂದು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿ ಆಯೋಜಿಸಿದ್ದ ಯುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯುವ ಸಮುದಾಯ ದೇಶದ ಬಹುದೊಡ್ಡ ಆಸ್ತಿಯಿದ್ದಂತೆ. ಕಳೆದ 9 ವರ್ಷಗಳಿಂದ ರಾಜ್ಯ ಸೇರಿದಂತೆ ದೇಶದ ಯುವಕರು, ಬಡ ಹಾಗೂ ಮಧ್ಯಮ ವರ್ಗದ ಜನರ ಪರಿಸ್ಥಿತಿ ಯಾವ ಮಟ್ಟ ತಲುಪಿದೆ ಎಂಬುದನ್ನು ಯುವಕರು ಚಿಂತಿಸಬೇಕು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕೋರಿದರು.
ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಕೊಡುವ ಭರವಸೆ ಮತ್ತು ಆಶ್ವಾಸನೆಗಳು ಕಾರ್ಯರೂಪಕ್ಕೆ ಬರುವುದಿಲ್ಲ. ನುಡಿದಂತೆ ನಡೆಯುವ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂಬುದನ್ನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 100ಕ್ಕೂ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಕಳೆದ ಐದು ವರ್ಷಗಳ ಕಾಲ ಜನವಿರೋಧಿ ಸರ್ಕಾರದ ಆಡಳಿತವನ್ನು ನೋಡಿ ಬೇಸತ್ತಿರುವ ಎಲ್ಲ ವರ್ಗದ ಜನರು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿ ಯಾವುದೇ ಜಾತಿ- ಧರ್ಮದ ರಾಜಕಾರಣ ನಡೆಯುವುದಿಲ್ಲ. ಅಭಿವೃದ್ಧಿ ಜತೆಗೆ ಎಲ್ಲ ಜನರ ಹಿತಾಸಕ್ತಿ ಬಯಸುವ ಸಮರ್ಥ ಅಭ್ಯರ್ಥಿ ಮತ್ತು ಸರ್ಕಾರ ಬೇಕೆಂಬುದೇ ಜನಸಾಮಾನ್ಯರ ಆಶಯವಾಗಿದೆ. ರಾಜ್ಯದಲ್ಲಿ 2.5 ಲಕ್ಷ ಹುದ್ದೆ ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡಿ ದುಡಿಯುವ ಕೈಗಳಿಗೆ ಕೆಲಸ ಕೊಡುವ ಆಸಕ್ತಿಯಿಲ್ಲದ ಬಿಜೆಪಿ ಸರ್ಕಾರ, ಕೇವಲ ಉದ್ಯಮಿಗಳಿಗೆ ಮಣೆ ಹಾಕಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಜತೆಗೆ, ಈಗಾಗಲೇ ಘೋಷಣೆ ಮಾಡಿರುವ ಪ್ರಮುಖ ನಾಲ್ಕೈದು ಗ್ಯಾರಂಟಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿದೆ ಎಂದರು.
ಕೈಗಾರಿಕೆ ಸ್ಥಾಪನೆಗೆ ಕಟಿಬದ್ಧ: ವಿಧಾನಸಭಾ ಕ್ಷೇತ್ರದ ಕೊಪ್ಪ ಸೇರಿದಂತೆ ತಾಲೂಕಿನ ಕನಿಷ್ಠ 10 ಸಾವಿರ ಮಂದಿ ಯುವಕರು ಮತ್ತು ಹೆಣ್ಣುಮಕ್ಕಳಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕಾ ಮತ್ತು ಗಾರ್ಮೆಂಟ್ಸ್ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಚಾಲನೆ ಕೊಟ್ಟಿದ್ದ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ಚುನಾವಣೆ ಮುಗಿಯುತ್ತಿದ್ದಂತೆ ಅವುಗಳಿಗೆ ಮರುಚಾಲನೆ ನೀಡಲಾವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖಂಡರಾದ ಸುನಿಲ್‌ಲಕ್ಷ್ಮೀಕಾಂತ್, ಸಚ್ಚಿನ್ ಚಲುವರಾಯಸ್ವಾಮಿ, ಕೊಣನೂರು ಧನಂಜಯ ಹಲವರಿದ್ದರು.