

ಚಿಟಗುಪ್ಪ: ಪಟ್ಟಣದಲ್ಲಿ ಸಾರ್ವಜನಿಕರಿಗೆ ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ವಿದ್ಯುತ್ ದೀಪಗಳ ಸೌಲಭ್ಯ ಒದಗಿಸಲು ಹಾಗೂ ಸಮಸ್ಯೆಗೆ ಸ್ಪಂದಿಸಿ ತಕ್ಷಣ ಕ್ರಮ ವಹಿಸಲು ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕೆಂದು ಪುರಸಭೆ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ತಾಕೀತು ಮಾಡಿದರು.
ಪುರಸಭೆಯಲ್ಲಿ ಅಧ್ಯಕ್ಷ ದಿಲೀಪಕುಮಾರ ಬಗ್ದಲಕರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ತಮ್ಮ ವಾರ್ಡ್ಗಳಲ್ಲಿನ ಸಮಸ್ಯೆಗಳನ್ನು ಆಯಾ ಸದಸ್ಯರು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಂತೆ ಅಧಿಕಾರಿಗಳು ಸ್ಪಂದಿಸಿ ಬಗೆಹರಿಸಲು ಮುಂದಾಗಬೇಕು. ಇದರಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಸೂಚಿಸಿದರು.
ಹಿಂದಿನ ಸಾಮಾನ್ಯ ಸಭೆಯ ನಡುವಳಿಕೆಯನ್ನು ಸಭೆಯ ಸಕ್ಷಮ ಓದಿ ಹೇಳಲಾಯಿತು. ಹಾಜರಿದ್ದ ಎಲ್ಲ ಸದಸ್ಯರುಗಳ ಸರ್ವಾನುಮತದೊಂದಿಗೆ ಅನುಮೋದನೆ ನೀಡಿ ಠರಾವು ಪಾಸ್ ಮಾಡಿದರು. ಮಾರ್ಚ್ ೨೦೨೫ ರಿಂದ ಮೇ ೨೦೨೫ರವರೆಗೆ ೩ ತಿಂಗಳದಲ್ಲಿ ಜರುಗಿದ ಜಮಾ ಮತ್ತು ಖರ್ಚಿಗೆ ಸರ್ವ ಸದಸ್ಯರು ಅನುಮೋದನೆ ನೀಡಿದರು.
೧೫ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಯೋಜನೆಯಡಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸರ್ವ ಸದಸ್ಯರು ಅನುಮೋದನೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಹಳಷ್ಟು ದಿನಳಿಂದ ಪ್ರಮುಖ ಕಾಯಂ ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡಲು ಈ ಹುದ್ದೆಗಳು ಭರ್ತಿ ಮಾಡಿಕೊಳ್ಳುವುದು ಬಹಳಷ್ಟು ಅವಶ್ಯಕತೆವಿದೆ ಎಂದು ಸಭೆಯ ಗಮನಕ್ಕೆ ವೈದ್ಯಾಧಿಕಾರಿ ತಂದಿದ್ದರಿಂದ ಚರ್ಚೆ ನಡೆಸಲಾಯಿತು.
ಪಟ್ಟಣದ ವ್ಯಾಪ್ತಿಯಲ್ಲಿನ ತರಕಾರಿ ಮಾರಾಟಗಾರರಿಗೆ ಸೂಕ್ತವಾದ ಸ್ಥಳ ಇಲ್ಲದಿರುವುದರಿಂದ ರಸ್ತೆಯ ಮೇಲೆ ಬೇರೆ ಬೇರೆ ಕಡೆ ಕುಳಿತು ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು ಸದರಿ ತರಕಾರಿ ಮಾರುಕಟ್ಟೆಗೆ ಬೇರೆ ಸೂಕ್ತವಾದ ಸ್ಥಳದ ವ್ಯವಸ್ಥೆ ಮಾಡಿಕೊಡಲು ಸದಸ್ಯರು ಸಭೆ ಗಮನಕ್ಕೆ ತಂದು ಒತ್ತಾಯಿಸಿದರು.
ಪಟ್ಟಣದ ವಿವಿಧ ವಾರ್ಡ್ಗಳಲ್ಲಿನ ರಸ್ತೆ ಮತ್ತು ಚರಂಡಿಗಳ ನಿರ್ಮಾಣಗಳ ಹಾಗೂ ಇತರೆ ಅಭಿವೃಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಯಿತು.
ಪುರಸಭೆ ಉಪಾಧ್ಯಕ್ಷ ನಸೀರಖಾನ್, ಸದಸ್ಯರಾದ ಮೀರ್ ಮುಜಾಫರ್ ಪಟೇಲ್, ರಹೇಮಾನ್ ಪಾಶ, ಮಹ್ಮದ್ ನಿಸಾರೋದ್ದಿನ್, ಲಕ್ಷ್ಮೀ ಶ್ರೀಕಾಂತ ಭಟ್ಟ, ರೋಜಮ್ಮ ತಿಪ್ಪಣ್ಣ, ವನಿತಾಬಾಯಿ ಗೋಪಿನಾಥ, ಮಾಲಾಶ್ರೀ ಶಾಮರಾವ ಭೂತಾಳೆ, ಸೌಭಾಗ್ಯವತಿ ಅಶೋಕ ಸ್ವಾಮಿ, ರೇವಣಸಿದ್ದಪ್ಪ, ವಿಶಾಲ ಬೋರಳೆ, ರಾಜದೀಪ ಜಾಬಾ, ಮಹ್ಮದ್ ಹಬೀಬ್ ಅಹ್ಮದ್, ನಸೀರ ಹಕ್ಕೀಂ, ಜಲೀಸಾ ಬೇಗಂ, ಪದ್ಮಾವತಿ ಚಂದ್ರಕಾಂತ, ಶೋಭಾ ಸುಭಾಷ ಕುಂಬಾರ, ಲಕ್ಷ್ಮೀಬಾಯಿ ಶರಣು ಗಡಮಿ, ಶಶಿಕಲಾ ಈರಣ್ಣ ಇತರರಿದ್ದರು. ಮುಖ್ಯಾಧಿಕಾರಿ ಹುಸಾಮೋದ್ದಿನ್ ಬಾಬಾ ಸ್ವಾಗತಿಸಿದರು.