

ಮೈಸೂರು: ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ನಗರಪಾಲಿಕೆ ಹಮ್ಮಿಕೊಂಡಿರುವ ವಲಯ ಅದಾಲತ್ ಮಂಗಳವಾರ ಅಗ್ರಹಾರದಲ್ಲಿರುವ ವಲಯ ಕಚೇರಿ 1 ಮತ್ತು ಜಯನಗರದಲ್ಲಿರುವ ವಲಯ ಕಚೇರಿ 2ರಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅದಾಲತ್‌ಗೆ ಚಾಲನೆ ನೀಡಿ ವಾತನಾಡಿದ ಮೇಯರ್ ಶಿವಕುಮಾರ್, ವಲಯ ಕಚೇರಿಗಳಲ್ಲಿ ದಿನನಿತ್ಯ ಬರುವ ಅರ್ಜಿಗಳನ್ನು ಆಗಿಂದಾಗೆ ವಿಲೇವಾರಿ ಮಾಡಬೇಕು. ವಲಯ ಕಚೇರಿಗಳಲ್ಲಿ ಅರ್ಜಿಗಳು ವಿಲೇವಾರಿಯಾದರೆ ಜನರು ಮುಖ್ಯ ಕಚೇರಿಗೆ ಬರುವುದು ತಪ್ಪುತ್ತದೆ. ಹಾಗಾಗಿ ವಲಯ ಕಚೇರಿಯಲ್ಲಿಯೇ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಬೇಕು. ವಲಯ ಕಚೇರಿಯಲ್ಲಿ ಬಗೆಹ ರಿಸಲು ಸಾಧ್ಯವಾಗದ ಅರ್ಜಿಗಳು ಇದ್ದರೆ ಮಾತ್ರ ಮುಖ್ಯ ಕಚೇರಿಗೆ ಕಳುಹಿಸಬೇಕು ಎಂದರು.
ಸಣ್ಣಪುಟ್ಟ ಸಮಸ್ಯೆ, ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಅನಗತ್ಯವಾಗಿ ಜನರನ್ನು ಅಲೆದಾಡಿಸುವುದು, ಹಣಕ್ಕಾಗಿ ಒತ್ತಾಯಿಸುವುದು, ಬ್ರೋಕರ್‌ಗಳಿಗೆ ಪ್ರೋತ್ಸಾಹ ನೀಡುವುದು ಕಂಡು ಬಂದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರು ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಅರ್ಜಿ ವಿಲೇವಾರಿಯಾಗಬೇಕು. ವಲಯ ಕಚೇರಿಗಳು ಅರ್ಜಿಗಳು ನಿಗದಿತ ಕಾಲಮಿತಿಯೊಳಗೆ ವಿಲೇವಾರಿಯಾಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ವಲಯ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಅದಾಲತ್‌ಗೆ ಆಗಮಿಸಿ ತಮ್ಮ ಅರ್ಜಿಗಳನ್ನು ವಿಲೇವಾರಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಿಬ್ಬಂದಿ ಸಾರ್ವಜನಿಕರು ಬಂದಾಗ ತಾಳ್ಮೆಯಿಂದ ದೂರು ಆಲಿಸಿ ಇತ್ಯರ್ಥಪಡಿಸಬೇಕು. ಅಧಿಕಾರಿಗಳು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಅನಾಗರಿಕರಂತೆ ವರ್ತಿಸುವವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಖಾತೆಗೆ ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಸ್ಥಳ ಪರಿಶೀಲನೆ ನಡೆಸದೆ ಟೇಬಲ್‌ನಲ್ಲಿ ಇಟ್ಟುಕೊಂಡಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಮೇಯರ್ ಕೂಡಲೇ ವಿಲೇವಾರಿ ಮಾಡಿ ಖಾತೆ ಮಾಡಬೇಕು ಎಂದು ಸೂಚಿಸಿದರು.
ನೀರಿನ ಬಿಲ್ ಹೆಚ್ಚು ಬರುತ್ತಿದ್ದು, ಹೊಸ ಮೀಟರ್ ಅಳವಡಿಸುವಂತೆ ಮನವಿ ಮಾಡಿದರೂ ಪಾಲಿಕೆ ಸಿಬ್ಬಂದಿ ಪರಿಶೀಲಿಸಿಲ್ಲ. ಹೊಸ ಮೀಟರ್ ಅಳವಡಿಸದ ಹಿನ್ನೆಲೆಯಲ್ಲಿ ಮಾಸಿಕ 500 ರೂ.ಬಿಲ್ ಬರುತ್ತಿದ್ದು, ಕೂಲಿ ಮಾಡುವ ನಾವು ಇಷ್ಟೊಂದು ಹಣ ಕಟ್ಟುವುದಕ್ಕೆ ಸಾಧ್ಯವಿಲ್ಲ. ಹೊಸ ಮೀಟರ್ ಅಳವಡಿಸಿಕೊಡುವಂತೆ ಹುಲ್ಲಿನ ಬೀದಿಯ ತರಕಾರಿ ವ್ಯಾಪಾರಿ ಶಿವಮ್ಮ ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.
ಮನೆಗಳ ಖಾತೆ ವರ್ಗಾವಣೆ, ಕಂದಾಯ ನಿಗದಿ, ಬಿಲ್ಡಿಂಗ್ ಪ್ಲಾನ್, ಸಿಆರ್, ಟ್ರೇಡ್ ಲೈಸನ್ಸ್, ನೀರು ಸರಬರಾಜು, ಒಳಚರಂಡಿ ಸಮಸ್ಯೆ ಸೇರಿದಂತೆ ವಿವಿಧ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿದರು. ಈ ಸಂದರ್ಭ ಉಪ ಮೇಯರ್ ಡಾ.ಜಿ.ರೂಪ, ಪಾಲಿಕೆ ಸದಸ್ಯರಾದ ಎಂ.ಎಸ್.ಶೋಭಾ, ಮ.ವಿ.ರಾಮಪ್ರಸಾದ್, ಪಲ್ಲವಿಬೇಗಂ, ಬಿ.ವಿ.ಮಂಜುನಾಥ್, ಛಾಯಾದೇವಿ, ಸೌಮ್ಯ, ವಲಯ ಆಯುಕ್ತರಾದ ಮಂಜುನಾಥ್ ರೆಡ್ಡಿ, ಸೋಮಶೇಖರ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ಮಧುಸೂದನ್, ರಂಜಿತ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಶ್ವಿನ್ ಕುಮಾರ್ ಹಾಗೂ ಇತರರು ಇದ್ದರು.