ಜನರ ಸಮಸ್ಯಗೆ ಸ್ಪಂದಿಸಿ ಕೆಲಸ ಮಾಡಿ:ಅಧಿಕಾರಿಗಳಿಗೆ ಶಾಸಕ ಸ್ವರೂಪ್ ಸೂಚನೆ

ಜನರ ಸಮಸ್ಯಗೆ ಸ್ಪಂದಿಸಿ ಕೆಲಸ ಮಾಡಿ:ಅಧಿಕಾರಿಗಳಿಗೆ ಶಾಸಕ ಸ್ವರೂಪ್ ಸೂಚನೆ
Published on

ಹಾಸನ :ಸೆಸ್ಕ್ ಹಾಗು ಲೋಕೋಪಯೋಗಿ ಇಲಾಖೆಯವರು ಚುರುಕಾಗಿ ಕೆಲಸ ಮಾಡಬೇಕು. ನಗರದ ಬಹುತೇಕ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೆ ಸಂಜೆಯಾದರೆ ಕತ್ತಲು ಆವರಿಸುತ್ತದೆ ತಕ್ಷಣವೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಶಾಸಕ ಎಚ್.ಪಿ.ಸ್ವರೂಪ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು,ಲೇಔಟ್ ನಿರ್ಮಾಣ ವೈಜ್ಞಾನಿಕವಾಗಿರುವಂತೆ ನೋಡಿಕೊಳ್ಳಬೇಕು. ಲೇಔಟ್‌ಗಳಲ್ಲಿ ಮನೆಗಳನ್ನು ಕಟ್ಟಿದ ಬಳಿಕ ಲೋಡ್‌ಶೆಡ್ಡಿಂಗ್ ಸಮಸ್ಯೆ ಹೆಚ್ಚಾಗುತ್ತಿದೆ. ಸದಾಶಿವ ನಗರ, ಬಸವೇಶ್ವರ ನಗರ, ಹುಣಸಿನಕೆರೆ, ಸತ್ಯಮಂಗಲ ಬಡಾವಣೆ, ಹೌಸಿಂಗ್ ಬೋರ್ಡ್ ಸೇರಿ ಅನೇಕ ಕಡೆ ಸಮಸ್ಯೆ ಕೇಳಿಬಂದಿದೆ. ಸೆಸ್ಕ್ ಅಧಿಕಾರಿಗಳು ಮೊದಲೇ ಟಿಸಿ ಹಣ ಪಾವತಿಸಿಕೊಳ್ಳಬೇಕೆಂದು ಹೇಳಿದರು.
ಸೆಸ್ಕ್ ಹಾಸನ ವಿಭಾಗ ಕಾರ್ಯಪಾಲಕ ಇಂಜಿನೀಯರ್ ಹೇಮಚಂದ್ರು ಅವರು ಮಾತನಾಡಿ, ಕೇಂದ್ರ ಸರ್ಕಾರ ಹೊಸದಾಗಿ ಕುಸುಮ್ ಬಿ ಹಾಗು ಸಿ ಎಂಬ ಸೋಲಾರ್ ಪ್ಲಾಂಟ್ ಯೋಜನೆ ಅನುಷ್ಠಾನಗೊಳಿಸಿದ್ದು, ಅದಕ್ಕೆ ಜಾಗದ ಅವಶ್ಯಕತೆಯಿದೆ. ಕುಸುಮ್ ಬಿ ಯೋಜನೆಯಡಿ ರೈತರ ಜಮೀನುಗಳಲ್ಲಿ ಸೋಲಾರ್ ಪ್ಲಾಂಟ್ ಹಾಕಲಾಗುವುದು. ಇದರಿಂದ ಹಗಲು ವೇಳೆ 7 ಗಂಟೆ ವಿದ್ಯುತ್ ಪಡೆಯಬಹುದು. ಅದಕ್ಕೆ ಕೇಂದ್ರ ಸರ್ಕಾರ ಶೇ. 30, ರಾಜ್ಯ ಶೇ. 50 ಹಾಗು ಫಲಾನುಭವಿ ಶೇ. 20ರಷ್ಟು ವೆಚ್ಚ ಭರಿಸಬೇಕು. ಕುಸುಮ್ ಸಿ ಅಡಿ ಸೆಸ್ಕ್‌ನಿಂದಲೇ ಸೋಲಾರ್ ಪ್ಲಾಂಟ್ ಅಳವಡಿಸಲಾಗುತ್ತಿದ್ದು ಸರ್ಕಾರ ನಮಗೆ 15 ರಿಂದ 20 ಎಕರೆ ಜಾಗ ನೀಡಬೇಕು. ಪ್ರತಿ ತಾಲ್ಲೂಕಿನಲ್ಲಿ 2 ಪ್ಲಾಂಟ್ ಅಳವಡಿಕೆಗೆ ಅನುಮತಿ ಇದ್ದು, ಸೀಗೆ ಗುಡ್ಡದಲ್ಲಿ 18 ಎಕರೆ ಜಾಗ ಗುರುತಿಸಲಾಗಿದೆ. ಶಾಂತಿಗ್ರಾಮ ಹೋಬಳಿ ಭಾಗದಲ್ಲಿ ಜಾಗ ಸಿಗುತ್ತಿಲ್ಲ. ಹಾಸನದ ಹಿಮ್ಸ್‌ಗೆ ಹೆಚ್ಚಿನ ವಿದ್ಯುತ್ ಅವಶ್ಯಕತೆಯಿರುವುದರಿಂದ ಅಲ್ಲಿಯೂ ಪ್ಲಾಂಟ್ ನಿರ್ಮಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಇಲಾಖೆ ಅಧಿಕಾರಿಗಳು ಸಭೆಗೆ ಹಾಜರಾಗಿ ಮಾಹಿತಿ ನೀಡುವುದಷ್ಟೆ? ಕೆಲಸವಲ್ಲ. ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಮುಂದಿನ ಸಭೆಯಲ್ಲಿ ಈಗ ನೀಡಿರುವ ಮಾಹಿತಿ ಪೂರ್ಣವಾಗಿದೆಯೋ ಇಲ್ಲವೋ ಎಂಬುದರ ಚರ್ಚೆಯಾಗಬೇಕು. ಅಧಿಕಾರಿಗಳ ಕರ್ತವ್ಯ ಲೋಪವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಸಮಸ್ಯೆ ಇರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಬೇಕೆಂದು ಎಚ್ಚರಿಸಿದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಕಾಸ್ ಅವರು ಮಾತನಾಡಿ, ನಗರದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನವಿದೆಯಾದರೂ ಸರ್ಕಾರಿ ಜಾಗ ಸಿಗುತ್ತಿಲ್ಲ. ನಗರದ ಮುಖ್ಯ ರಸ್ತೆಗಳಲ್ಲಿ ವ್ಯಾಪಾರಿಗಳು ಮೀನು ಮಾರಾಟ ಮಾಡುತ್ತಿದ್ದು, ಅನೈರ್ಮಲ್ಯ ಹೆಚ್ಚಾಗುತ್ತಿದೆ ಎಂದರು.
ಶಾಸಕ ಎಚ್.ಪಿ.ಸ್ವರೂಪ್ ಅವರು ಮಾತನಾಡಿ, ನಗರದ ಬಿಎಂ ರಸ್ತೆ, ಎಂಸಿಇ ಕಾಲೇಜು ಮುಂಭಾಗ ಮೀನು ವ್ಯಾಪಾರಿಗಳು ಇದ್ದಾರೆ. ರಸ್ತೆಯ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ಸೌಂದರ್ಯ ಹಾಳಾಗುತ್ತಿರುವುದಲ್ಲದೆ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದೆ. ಮೀನು ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆಯಾಗಬೇಕು. ಡೇರಿ ವೃತ್ತದ ಬಳಿ ಜಾಗ ಗುರುತಿಸಿದ್ದು ಅಲ್ಲಿಯೇ ಮಾರುಕಟ್ಟೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭೆ ಇಂಜಿನೀಯರ್ ಕವಿತಾ ಅವರು ಮಾತನಾಡಿ, ಹೈಟೆಕ್ ಮೀನು ಮಾರುಕಟ್ಟೆಗೆ ಸ್ಥಳದ ಅಭಾವವಿದೆ. ಸಂತೆಪೇಟೆಯಲ್ಲಿ ಜಾಗ ನೀಡುತ್ತೇವೆ ಎಂದರೂ ಅಲ್ಲಿಗೆ ಗ್ರಾಹಕರು ಬರುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಮಾಂಸಾಹಾರ ಅಂಗಡಿಗಳು ಒಂದೇ ಕಡೆ ಇರಬೇಕೆಂಬ ನಿಯಮವಿದೆ ಎಂದು ಸಭೆಯ ಗಮನಕ್ಕೆ ತಂದರು.
ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಶ್ರೀನಿವಾಸ್ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿ ನೂತನ ಕಟ್ಟಡಕ್ಕೆ ಮೊದಲ ಹಂತದಲ್ಲಿ 10 ಹಾಗು 2ನೇ ಹಂತದಲ್ಲಿ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕೆಲಸ ನಡೆಯುತ್ತಿದೆ. 14 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಕಚೇರಿ ಸಮುಚ್ಛಯ ಕಾಮಗಾರಿ ಪ್ರಗತಿಯಲ್ಲಿದೆ. ಹಾಸ್ಟೆಲ್, ಉಪವಿಭಾಗಾಧಿಕಾರಿ ಹಾಗು ತಹಶೀಲ್ದಾರ್ ವಸತಿ ಗೃಹ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಅವರು ಮಾತನಾಡಿ, ಡೆಂೆ ಕಾಯಿಲೆ ಹೆಚ್ಚುತ್ತಿರುವ ಹಿನ್ನಲೆ ಶಾಲಾ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಶ್ವೇತಾ ರವೀಂದ್ರ ಹಾಗು ಶ್ವೇತಾ ರವೀಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net