ಜನರ ಸಂಕಷ್ಟಕ್ಕೆ ಆಳುವ ಸರ್ಕಾರಗಳೇ ಕಾರಣ:ಎಸ್.ವರಲಕ್ಷ್ಮೀ ಆರೋಪ

ಜನರ ಸಂಕಷ್ಟಕ್ಕೆ ಆಳುವ ಸರ್ಕಾರಗಳೇ ಕಾರಣ:ಎಸ್.ವರಲಕ್ಷ್ಮೀ ಆರೋಪ
Published on

ಹಾಸನ: ಅಭಿವೃದ್ಧಿಯ ವಿಚಾರಗಳಿಂದ ಆಳುವ ಸರ್ಕಾರಗಳು ಉದ್ದೇಶಪೂರ್ವಕವಾಗಿ ಜನರನ್ನು ನಿರ್ಲಕ್ಷಿಸುತ್ತಿರುವುದರಿಂದ ಜನತೆ ಸಂಕಷ್ಟದೆಡೆಗೆ ದೂಡಲ್ಪಡುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮೀ ದೂರಿದರು.

ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಿಪಿಎಂ ಹಾಸನ ಜಿಲ್ಲಾ ಘಟಕದ 12ನೇ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೂರನೇ ಅವಧಿಗೆ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು ಆರಂಭದ ದಿನದಿಂದಲೂ ತಾನು ತಿನ್ನಲ್ಲ ತಿನ್ನಲೂ ಬಿಡುವುದಿಲ್ಲ ಮತ್ತು ಜನತೆಯ ಪ್ರಧಾನ ಸೇವಕ ಎಂಬ ಜನಪ್ರಿಯ ಘೋಷಣೆಗಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆಸಿದ ಕೋವಿಡ್ ಹಗರಣಕ್ಕೆ ಶಿಕ್ಷೆ ಕೊಡಿಸುತ್ತಾರಾ? ಕೊರೊನಾ ಚಿಕಿತ್ಸೆಗಾಗಿ ಒಂದು ಪಿಪಿಇ ಕಿಟ್‌ಗೆ ಮಾರುಕಟ್ಟೆಯಲ್ಲಿ 317 ರೂ. ಇದ್ದರೆ ಬಿಜೆಪಿಯವರು 2500 ರೂ. ನೀಡಿದ್ದಾರೆ. ಅದೇ ರೀತಿ ಐಸಿಯು ಬೆಡ್‌ಗೆ ಮಾರುಕಟ್ಟೆಯಲ್ಲಿ 98,000 ರೂ. ಇದ್ದರೆ ಇವರು 2 ಲಕ್ಷ ರೂ. ನೀಡಿದ್ದಾರೆ ಎಂದು ತನಿಖಾ ಏಜೆನ್ಸಿಗಳ ಮಾಹಿತಿ ಆಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ದೇಶದ ಚುಕ್ಕಾಣಿ ಹಿಡಿದಿರುವ ಮೋದಿಯವರು ಏನು ಹೇಳುತ್ತಾರೆ? ಜನತೆ ಕ್ಷಮಿಸಲಾರದ ಈ ತಪ್ಪಿಗೆ ಶಿಕ್ಷೆ ಏನು ಎಂದು ಪ್ರಶ್ನಿಸಿದರು.

ಜನತೆಗೆ ವಿರೋಧವಾದ ಕಾನೂನುಗಳನ್ನು ಮತ್ತು ನೀತಿಗಳನ್ನು ಸರ್ಕಾರ ಜಾರಿ ಮಾಡುತ್ತಿದೆ. ರೈತರ ಭೂಮಿಯ ಮೇಲೆ ಕಣ್ಣು ಹಾಕಿರುವ ಸರ್ಕಾರಗಳು ಪ್ರತಿ ತಾಲೂಕುಗಳಲ್ಲಿ ಕನಿಷ್ಠ 10 ಎಕರೆಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಮೀಸಲಿಡುವ ಆದೇಶ ಹೊರಡಿಸಿದೆ. ಇದನ್ನು ವಿರೋಧಿಸಿ ರೈತರು ನಮ್ಮ ಭೂಮಿಯನ್ನು ನಮಗೆ ಬಿಡಿ ಎಂಬ ಹೋರಾಟವನ್ನು ಸಂವಿಧಾನ ಸಮರ್ಪಣಾ ದಿನವಾದ ನ.26ರಿಂದ ನಡೆಸಲಿದ್ದಾರೆ. ಇದಕ್ಕೆ ಸಿಪಿಎಂ ಬೆಂಬಲ ನೀಡಲಿದೆ ಎಂದು ಹೇಳಿದರು.

ಐಎಂಎಫ್ ವರದಿಯಂತೆ ಗ್ರಾಮೀಣ ಪ್ರದೇಶಗಳು ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿವೆ. ಗ್ರಾಮೀಣ ಜನತೆ ಕೂಡ ಅಪೌಷ್ಟಿಕತೆ ಸೇರಿದಂತೆ ವಿವಿಧ ಕಾರಣಗಳಿಂದ ಜೀವಿತಾವಧಿ 60 ವರ್ಷಕ್ಕೆ ಇಳಿದಿದೆ. ಇದಕ್ಕೆ ಬೆಲೆ ಏರಿಕೆ ಮತ್ತು ದುಡಿಮೆಯ ಕೂಲಿ ಕಡಿಮೆಯಾಗಿರುವುದು. ಹಾಗಾಗಿ ವಿವಿಧ ದುಡಿಯುವ ವರ್ಗಗಳ ಕನಿಷ್ಠ ಕೂಲಿಯನ್ನು ವಾರ್ಷಿಕ 36 ಸಾವಿರ ರೂ.ಗೆ ಏರಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಉದ್ಯೋಗ ನಷ್ಟ ತೀವ್ರಗತಿಯಲ್ಲಿ ಏರುತ್ತಿದೆ. ಸರ್ಕಾರಗಳೂ ಕೂಡ ಅದೇ ದಾರಿಯಲ್ಲಿ ಸಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ನಿರ್ವಹಕ ರಹಿತ 5000 ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುವ ಬಗ್ಗೆ ಹೇಳಿದ್ದಾರೆ. ಇದರ ಜೊತೆಗೆ ಹೊರಗುತ್ತಿಗೆ , ಸ್ಕೀಂ, ಮತ್ತಿತರ ಮಾದರಿ ಮೂಲಕ ಶೇ.95 ಭಾಗ ಖಾತ್ರಿ ಇಲ್ಲದ ಉದ್ಯೋಗಗಳಿಗೆ ಜನರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ರಾಜ್ಯವೊಂದರಲ್ಲೇ 11 ಲಕ್ಷ ಉದ್ಯೋಗಗಳು ಖಾಲಿ ಇವೆ. ಹಾಗಾಗಿ ಸರ್ಕಾರಗಳೇ ಜನರನ್ನು ಸಂಕಷ್ಟಕ್ಕೆ ದೂಡುತ್ತಿವೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಕಾರ್ಯದರ್ಶಿ ಮಂಡಳಿ ಸದಸ್ಯ ನವೀನ್‌ಕುಮಾರ್ ಮತ್ತು ಹಾಸನ ಸ್ಥಳೀಯ ಸಮಿತಿ ಕಾರ್ಯದರ್ಶಿ ಪೃಥ್ವಿ, ಜಿ.ಪಿ.ಸತ್ಯನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net