

ಚಿತ್ರದುರ್ಗ: ಜನರಿಗೆ ಹಕ್ಕು, ಕರ್ತವ್ಯಗಳನ್ನು ಕೊಟ್ಟಿರುವ ನಮ್ಮ ಸಂವಿಧಾನದಲ್ಲಿ ಜನರ ಗೌರವಯುತ ಜೀವನಕ್ಕಾಗಿ ಕಾನೂನುಗಳನ್ನು ರ ಚಿಸಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.
ನಗರದ ಎಸ್‌ಜಿ ಕಲ್ಯಾಣಮಂಟಪದಲ್ಲಿ ಬುಧವಾರ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು.
ಜನರ ಮೂಲ ಹಕ್ಕುಗಳ ರಕ್ಷಣೆಗೆ ಕರ್ನಾಟಕ ಲೋಕಾಯುಕ್ತ, ರಾಷ್ಟ್ರಮಟ್ಟದಲ್ಲಿ ಲೋಕಪಾಲ ಸಂಸ್ಥೆಗಳು ಕ್ರಿಯಾಶೀಲವಾಗಿವೆ. ವೃತ್ತಿ ಆಯ್ಕೆ, ಕಾನೂನುಬದ್ಧ ಜೀವನ ಹಕ್ಕು, ವ್ಯಕ್ತಿ, ಆತನ ಆಸ್ತಿಪಾಸ್ತಿ ರಕ್ಷಣೆ ಹಾಗೂ ಅಭಿವೃದ್ಧಿಗೆ ಅಗತ್ಯ ಕಾನೂನುಗಳಿವೆ. ಎಲ್ಲ ಧರ್ಮಗಳ ಆಶಯಗಳ ಕ್ರೂಢಿಕರಣವೇ ಸಂವಿಧಾನ. ಈ ಆಶಯದ ಕುರಿತಂತೆ ಕುವೆಂಪು ಎಲ್ಲರಿಗೂ ಸಮಪಾಲು, ಎಲ್ಲರಿಗೂ ಸಮಬಾಳು ಎಂದಿದ್ದಾರೆ. ಎಲ್ಲರಿಗೂ ಸಲ್ಲಬೇಕಾದ, ಎಲ್ಲರೂ ಅನುಸರಿಸಬೇಕಾದ ಗ್ರಂಥವೇ ನಮ್ಮ ಸಂವಿಧಾನವಾಗಿದೆ ಎಂದರು.
ಸಾರ್ವಜನಿಕರ ಅನುಕೂಲಕ್ಕೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳಿವೆ. ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿ ಶಾಸಕಾಂಗ ಕಾನೂನುಗಳನ್ನು ರಚಿಸಿದೆ. ಶಾಸಕಾಂಗ, ಕಾರ್ಯಾಂಗ ಸರಿಯಾಗಿ ಕೆಲಸ ಮಾಡದಿದ್ದಾಗ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕಾಗುತ್ತದೆ ಎಂದರು.
ಸವಲತ್ತುಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ್ದು ಅಧಿಕಾರಿಗಳ ಕರ್ತವ್ಯ. ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಸಮಸ್ಯೆಗಳು ಹೆಚ್ಚಾಗಿ ಜನ ದಂಗೆ ಏಳುತ್ತಾರೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ರಾಜ್ಯದ ಅಂದಾಜು 8 ಕೋಟಿ ಜನ ಸಂಖ್ಯೆಯಲ್ಲಿ ಶೇ.1ರಷ್ಟು ಜನ ಸರ್ಕಾರಿ ನೌಕರರಾಗಿದ್ದಾರೆ. ನೌಕರರ ಮೇಲೆ ಹೆಚ್ಚಿನ ಹೊಣೆ ಇದೆ. ಇದನ್ನರಿತು ಉತ್ತಮ ಸೇವೆ ನೀಡಿದರೆ ದೂರುಗಳ ಸಂಖ್ಯೆ ಕಡಿಮೆಯಾಗುತ್ತವೆ ಎಂದು ತಿಳಿಸಿದರು.
ಕರ್ತವ್ಯದಲ್ಲಿ ಮಾಡಬಾರದ ಕೆಲಸ ಮಾಡುವುದು, ವಿಳಂಬ ಅಥವಾ ಕೆಲಸ ಸಂಪೂರ್ಣ ನಿರ್ಲಕ್ಷಿಸುವುದು ಸರಿಯಲ್ಲವೆಂದರು.
ಸುಳ್ಳು ದೂರು ನೀಡಿದರೆ ಕ್ರಮ: ಅಧಿಕಾರಿಗಳಿಗೆ ತೊಂದರೆ ಕೊಡಬೇಕೆಂಬ ದುರುದ್ದೇಶದಿಂದ ಆಧಾರ, ದಾಖಲೆ ರಹಿತ ಸುಳ್ಳು ದೂರು ನೀಡಿದರೆ ಕನಿಷ್ಠ 6ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಹೊಣೆ ಅರಿತು ದೂರು ಕೊಡಬೇಕೆಂದು ಸಲಹೆ ನೀಡಿದರು.
ನ್ಯಾಯಾಲಯಗಳ ವ್ಯಾಪ್ತಿಗೆ ಬರುವಂತಹ ಪ್ರಕರಣಗಳ ವಿಚಾರಣೆಯನ್ನು ಲೋಕಾಯುಕ್ತ ನಡೆಸದು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿಸಿ ಟಿ. ವೆಂಕಟೇಶ್ ಮಾತನಾಡಿ, ಸಾರ್ವಜನಿಕರ ಕುಂದುಕೊರತೆಗಳನ್ನು ಬಗೆಹರಿಸಲು ತಮ್ಮ ಕಚೇರಿಯಲ್ಲಿ ಶಾಶ್ವತ ಅಹವಾಲು ಸ್ವೀಕಾರ ಕೇಂದ್ರ ಸ್ಥಾಪಿಸಲಾಗಿದೆ. ಕಂದಾಯ ಇಲಾಖೆಯನ್ನು ಸಂಪೂರ್ಣವಾಗಿ ಡಿಜಿಟೈಲೇಜಷನ್ ಮಾಡಲಾಗುತ್ತಿದೆ ಎಂದರು.
ಲೋಕಾಯುಕ್ತ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್, ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ. ವಿಜಯ್, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ, ಡಿವೈಎಸ್‌ಪಿ ಮೃತ್ಯುಂಜಯ, ತಹಸೀಲ್ದಾರ್ ಡಾ. ನಾಗವೇಣಿ ಇನ್ನಿತರ ಅಧಿಕಾರಿಗಳು ಇದ್ದರು.
ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಒಂದೇ ನಿವೇಶನಕ್ಕೆ 2 ಇ-ಸ್ವತ್ತು ಕೊಟ್ಟಿರುವುದು, ರಾಂಪುರದ ವಾಣಿಜ್ಯ ಸಂಕೀರ್ಣ ನಿರ್ಮಾಣದಲ್ಲಿ ರಸ್ತೆ ಒತ್ತುವರಿಯಾಗಿದೆ ಇತ್ಯಾದಿ ದೂರುಗಳ ವಿಚಾರಣೆ ನಡೆಯಿತು.
176 ಅರ್ಜಿಗಳ ನೋಂದಣಿ
ಒಟ್ಟು 176 ದೂರು ಅರ್ಜಿಗಳು ನೋಂದಣಿಯಾಗಿವೆ. ಇವುಗಳ ಪೈಕಿ 71 ಅರ್ಜಿಗಳ ವಿಚಾರಣೆ ನಡೆಸಿ,ಸೂಕ್ತ ಕ್ರಮಕ್ಕೆ ಸಂಬಂಧಿಸಿದ ಅ ಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಉಳಿದ ಅರ್ಜಿಗಳ ವಿಚಾರಣೆ ಗುರುವಾರ ಮುಂದುವರಿಯಲಿದೆ.
---