ಜನರ ಮನವೊಲಿಕೆಗೆ ಬೀದಿಗಿಳಿದ ತಹಸೀಲ್ದಾರ್

7HLY-1
Published on

ಹಳಿಯಾಳ: ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡುವ ಜನರನ್ನು, ಗುಂಪುಗೂಡಿ ಮಾತಾಡುವವರನ್ನು, ಅಂಗಡಿ ತೆರೆದು ದಿನಸಿ ನೀಡುವ ವ್ಯಾಪಾರಸ್ಥರನ್ನು ಮನವೊಲಿಸಲು ಸ್ವತಃ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಮಂಗಳವಾರ ಪೊಲೀಸರೊಂದಿಗೆ ಬೀದಿಗಳಿದರು.

ಜನ್ ಧನ್ ಖಾತೆಗೆ ಕೇಂದ್ರ ಸರ್ಕಾರ 500 ರೂ. ಪಾವತಿಸಿದ್ದನ್ನು ಪಡೆಯಲು ಗ್ರಾಹಕರು ಧಾವಿಸುತ್ತಿರುವುದರಿಂದ ಪಟ್ಟಣದ ಎಲ್ಲ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಗ್ರಾಹಕರ ಸರದಿ ಸಾಲು ರಸ್ತೆಯುದ್ದಕ್ಕೂ ಬಂದಿತ್ತು. ಅದನ್ನು ಕಂಡ ತಹಸೀಲ್ದಾರ್, ಬ್ಯಾಂಕ್ ವ್ಯವಸ್ಥಾಪಕರನ್ನು ಮತ್ತು ಸಿಬ್ಬಂದಿಯನ್ನು ಕರೆಯಿಸಿ, ಎಷ್ಟು ಜನ್​ಧನ್ ಗ್ರಾಹಕರೊಂದಿಗೆ ಆರ್ಥಿಕ ವಹಿವಾಟು ನಡೆಸಲು ಸಾಧ್ಯವೊ ಅಷ್ಟೇ ಗ್ರಾಹಕರಿಗೆ ಆಯಾ ದಿನದ ಟೋಕನ್ ನೀಡಿ, ಜನಜಂಗುಳಿ ತಪ್ಪಿಸಿ ಎಂದು ಆದೇಶಿಸಿದರು.

ಬ್ಯಾಂಕ್ ಹೊರಗೆ ನಿಂತ ಗ್ರಾಹಕರನ್ನು ಮಾತನಾಡಿಸಿದ ತಹಸೀಲ್ದಾರ್ ಗುಂಪುಗೂಡಿ ನಿಲ್ಲಬೇಡಿ ಎಂದು ಮನವಿ ಮಾಡಿದರು. ಪಟ್ಟಣದ ಮುಖ್ಯ ಬೀದಿಯಲ್ಲಿ ಗ್ರಾಹಕರೊಂದಿಗೆ ವಹಿವಾಟು ನಡೆಸುತ್ತಿದ್ದ ಬೇಕರಿಗೆ ಭೇಟಿ ನೀಡಿದ ತಹಸೀಲ್ದಾರರು, ಜನರನ್ನು ಸೇರಿಸುವ ಪ್ರಯತ್ನ ಮಾಡಿದ್ದರೆ ಬೇಕರಿ ಲೈಸನ್ಸ್ ರದ್ದು ಪಡಿಸುವುದಾಗಿ ಎಚ್ಚರಿಸಿದರು.

ಮನೆಯಲ್ಲಿಯೇ ಪಾರ್ಥನೆ ಮಾಡಿ: ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಮುಸ್ಲಿಂ ಸಮುದಾಯದ ಪ್ರಮುಖರೊಂದಿಗೆ ಸಭೆ ನಡೆಸಿ ಏ. 9ರಂದು ಶಬ್ ಇ ಬರಾತ್ ಪ್ರಾರ್ಥನೆಯನ್ನು ಮನೆಯಲ್ಲಿಯೇ ನಡೆಸುವಂತೆ ಹಾಗೂ ಖಬರಸ್ಥಾನಗಳಿಗೆ ಹೋಗುವುದಕ್ಕೂ ಅವಕಾಶ ನಿರಾಕರಿಸಲಾಗಿದೆ ಎಂದು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ತಿಳಿಸಿದರು.

ಮಂಗಳವಾರ ಮಿನಿ ವಿಧಾನಸೌಧದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ವಕ್ಪ ಬೋರ್ಡ್​ನಿಂದ ಪ್ರಾರ್ಥನೆ ರದ್ದುಗೊಳಿಸುಲು ಆದೇಶ ಹೊರಡಿಸಿದೆ ಎಂದು ತಿಳಿಸಿದ್ದು, ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರು.

ದಿನಸಿ ತರಕಾರಿ ಹಣ್ಣು ಹಂಪಲಗಳನ್ನು ಮನೆ ಮನೆಗೆ ಮಾರಾಟ ಮಾಡುವಂತೆ ಬೇಕರಿ ಅಂಗಡಿಯವರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net