ಜನರ ಬಗ್ಗೆ ಚಿಂತಿಸದ ಬಿಜೆಪಿ: ಮಧು ಬಂಗಾರಪ್ಪ ಟೀಕೆ

Published on

ಮೈಸೂರು: ರಸಗೊಬ್ಬರದ ಬೆಲೆ ಏರಿಕೆಯಿಂದ ರೈತರ ಪರಿಸ್ಥಿತಿ ಹದಗೆಟ್ಟಿದೆ. ದಿನಬಳಕೆ ವಸ್ತುಗಳ ಬೆಲೆಯೇರಿಕೆ, ಭ್ರಷ್ಟಾಚಾರದಿಂದ ಜನರು ಬಳಲುತ್ತಿದ್ದಾರೆ. ಆದರೂ ಬಿಜೆಪಿ ಈ ಬಗ್ಗೆ ಚಿಂತನೆ ಮಾಡುತ್ತಿಲ್ಲ ಎಂದು ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು.
ಶೇ.40 ಕಮಿಷನ್ ವ್ಯವಹಾರದಿಂದ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಎಲ್ಲ ಹುದ್ದೆಗಳ ನೇಮಕಾತಿಗಳಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಕುರಿತು ವಿರೋಧ ಪಕ್ಷಗಳು ಧ್ವನಿಯೆತ್ತಿದರೂ ಆಡಳಿತ ಪಕ್ಷ ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ಕೃಷಿ ಉಪಕರಣಗಳನ್ನು ಕೊಳ್ಳಲು ಸಬ್ಸಿಡಿ ನೀಡಲಾಗುತ್ತಿತ್ತು. ಆದರೀಗ ಸಬ್ಸಿಡಿ ನಿಲ್ಲಿಸಿರುವ ಸರ್ಕಾರ, ಕಾಂಗ್ರೆಸ್ ಸೇರಿದಂತೆ ಹಿಂದಿನ ಸರ್ಕಾರಗಳು ರೈತರಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ನಿಲ್ಲಿಸಿ ಮೀಟರ್ ಅಳವಡಿಸಲು ಮುಂದಾಗಿದೆ. ಒಂದು ವೇಳೆ ಮೀಟರ್ ಅಳವಡಿಸಿದರೆ ರೈತರು ಬಿಲ್ ಕಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಮೀಟರ್ ಕಿತ್ತು ಹಾಕುವ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ದೇಶವನ್ನು ಜಾತಿ, ಮತ, ಧರ್ಮದ ಆಧಾರದ ಮೇಲೆ ಛಿದ್ರಗೊಳಿಸಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ದಿ. ಎಸ್.ಬಂಗಾರಪ್ಪ ಅವರ ಅಭಿಮಾನಿಗಳು ರಾಜ್ಯಾದ್ಯಂತ ಇದ್ದು, ಅವರನ್ನು ಪಕ್ಷ ಹಾಗೂ ಪಾದಯಾತ್ರೆಗೆ ಸೆಳೆಯುವ ಜವಾಬ್ದಾರಿ ಹೊತ್ತಿದ್ದೇನೆ. ಕಾಂಗ್ರೆಸ್‌ನಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದರು. ಒಂದು ವೇಳೆ ಅಷ್ಟು ಹಣ ಹಾಕಿದರೆ ಆ ಪುಣ್ಯಾತ್ಮನಿಗೆ ನಾನೇ ಮತಹಾಕುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಶಾಸಕರಾದ ವಾಸು, ನಗರಾಧ್ಯಕ್ಷ ಆರ್.ಮೂರ್ತಿ, ಮುಡಾ ಮಾಜಿ ಅಧ್ಯಕ್ಷ ಪಿ.ಗೋವಿಂದರಾಜು, ಮುಖಂಡರಾದ ಶಿವಮಲ್ಲು, ಎಂ.ಶಿವಣ್ಣ, ಮಾರುತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net