

ಅರಕಲಗೂಡು: ಜನಶಕ್ತಿ ನಿರ್ಧಾರದ ಮುಂದೆ ಚುನಾವಣೆಯಲ್ಲಿ ಯಾವ ಆಟವೂ ನಡೆಯದು ಎಂದು ಶಾಸಕ ಎ.ಮಂಜು ಹೇಳಿದರು.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ತಾಲೂಕಿನ ರಾಮನಾಪುರಕ್ಕೆ ಶನಿವಾರ ರಾತ್ರಿ ಆಗಮಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ನಾನು ಜನಸೇವೆ ಮಾಡಬೇಕೆಂಬ ಸಂಕಲ್ಪದಲ್ಲೇ ವಿಜಯ ಸಾಧಿಸಿದ್ದೇನೆ. ಇದಕ್ಕೆ ಮತದಾರರ ಸಹಕಾರವೇ ಮುಖ್ಯವಾಗಿದೆ ಎಂದರು.
ಚುನಾವಣೆಯಲ್ಲಿ ಗೆಲ್ಲಲು ಯಾವ ಜೆಲ್ಲಿ, ಮರಳು ಮತ್ತು ದುಡ್ಡುಗಳ ಆಟ ನಡೆಯುವುದಿಲ್ಲ. ಜನರ ವಿಶ್ವಾಸವೇ ಮುಖ್ಯ ಎಂದರು.
ದುರಹಂಕಾರಿಗಳಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ನಾನು ಒಂದು ತೀರ್ಮಾನ ತೆಗೆದುಕೊಂಡಿದ್ದೇನೆ. ಹೊಂದಾಣಿಕೆ ರಾಜಕಾರಣ ಮಾಡುವವರನ್ನು ನಾನು ಹತ್ತಿರ ಸೇರಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.
ನಾನು ಇದುವರೆಗೂ ತಾಳ್ಮೆ, ಗೌರವದಿಂದ ಬದುಕಿರುವೆ. ಅದನ್ನು ಬಿಟ್ಟು ನಡೆದುಕೊಂಡಿಲ್ಲ. ಮತದಾರರ ಗೌರವ ಉಳಿಸಬೇಕಾದದ್ದು ನನ್ನ ಧರ್ಮ. ಜನರೂ ಅದರಂತೆ ಸಹಕಾರ ನೀಡಿದ್ದಾರೆ. ನಾನು ಗೆದ್ದರೂ, ಸೋತರೂ ಬದಲಾಗಿಲ್ಲ. ಬೇರೆಯವರಂತೆ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನಲ್ಲ. ಜನರ ಸೇವೆ ಮಾಡಬೇಕೆಂದು ರಾಜಕೀಯಕ್ಕೆ ಬಂದಿರುವೆ. ಈ ನಿಟ್ಟಿನಲ್ಲಿ ಅಧಿಕಾರವನ್ನು ಎಂದೂ ದುರುಪಯೋಗ ಪಡಿಸಿಕೊಳ್ಳಲಿಲ್ಲ. ಮುಂದೆಯೂ ಹಾಗೆಯೇ ಇದ್ದು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದು ಅವರು ಹೇಳಿದರು.