

ಶಿವಮೊಗ್ಗ: ಜಿಲ್ಲೆಯ ಜನರ ಆಶೋತ್ತರ ಹಾಗೂ ನಿರೀಕ್ಷೆಗಳಿಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯವಾಗುವ ಎಲ್ಲ ಕ್ರಮ ಅನುಸರಿಸಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ವಿದ್ಯಾವಂತರು, ಸಮಾಜಸೇವೆ, ಶಿಕ್ಷಣ ಹಾಗೂ ಸಮಾಜದ ವಿವಿಧ ಕ್ಷೇತ್ರದ ಗಣ್ಯರೊಂದಿಗೆ ‘ನಮ್ಮ ಕನಸಿನ ಶಿವಮೊಗ್ಗ ತಂಡ’ವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಉದ್ದ್ದೇಶದಿಂದ ಶನಿವಾರ ಸಂಜೆ ಆಯೋಜಿಸಿದ್ದ ‘ಡಿಜಿಟಲ್ ಸಂವಾದ’ದಲ್ಲಿ ಮಾತನಾಡಿದರು.
ಜಿಲ್ಲೆಯ ವಿದ್ಯಾವಂತ ಯುವಜನತೆ ಹಾಗೂ ಎಲ್ಲ ಸ್ತರದ ನಿರುದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಅದಕ್ಕಾಗಿ ವಿಮಾನ ನಿಲ್ದಾಣ, ರೈಲು ಸಂಪರ್ಕ, ರಸ್ತೆ ಸಾರಿಗೆ ಹಾಗೂ ಬೃಹತ್ ಸೇತುವೆಗಳ ನಿರ್ವಣ, ಶಿಕ್ಷಣ, ಪ್ರವಾಸೋದ್ಯಮ, ನೀರಾವರಿ, ಕೈಗಾರಿಕೆ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸತತ 25 ವರ್ಷಗಳ ನಂತರ ರಾಜ್ಯ ಮತ್ತು ಕೇಂದ್ರದಲ್ಲಿ ಏಕರೀತಿಯ ಸರ್ಕಾರ ರಚನೆ ಆಗಿರುವುದು ಕೂಡ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಾಯಕವಾಗಿದೆ. ಶಿವಮೊಗ್ಗದಲ್ಲಿ ರೈಲ್ವೆ ಕೋಚಿಂಗ್ ಸೆಂಟರ್ ಮತ್ತು ಟರ್ವಿುನಲ್ ನಿರ್ವಿುಸಲು ಉದ್ದೇಶಿಸಲಾಗಿದೆ. ಇದರಿಂದ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.
ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಗಮನಹರಿಸಲಾಗಿದೆ. ಜೋಗ ಅಭಿವೃದ್ಧಿ ಪ್ರಾಧಿಕಾರಕ್ಕೆ 10 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಉಡುಗುಣಿ, ನಗರ ಕೋಟೆ, ಶಿವಪ್ಪನಾಯಕನ ಅರಮನೆ, ಕವಲೇದುರ್ಗ ಮುಂತಾದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಕಲ್ಲೂರು ಮಂಡ್ಲಿಯಲ್ಲಿ ಚಾರಣ, ಸಾಹಸ ಕ್ರೀಡೆಗಳಿಗೆ ಉತ್ತೇಜನ, ಜೋಗದಲ್ಲಿ ಜಿಪ್ಲೈನ್ ಅಳವಡಿಕೆ, ಖಾಸಗಿ ಸಹಭಾಗಿತ್ವದಲ್ಲಿ ಕೊಡಚಾದ್ರಿ ಕೊಲ್ಲೂರು ನಡುವೆ ಕೇಬಲ್ ಕಾರ್ ಅಳವಡಿಕೆಗೆ ಉದ್ದೇಶಿಸಲಾಗಿದೆ. ಈ ಎಲ್ಲ ಕೆಲಸಗಳಿಗೆ ಪೂರಕವಾಗಿ 425 ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಳ್ಳುತ್ತಿರುವ ಸಿಗಂಧೂರು-ಕಳಸವಳ್ಳಿ ಸೇತುವೆ ನಿರ್ಮಾಣ ಕಾರ್ಯ ಕಳಸಪ್ರಾಯವೆನಿಸಿದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ, ಲಕ್ಷ್ಮೀನಾರಾಯಣ ಕಾಶಿ, ಉದ್ಯಮಿ ಶರತ್ ಭೂಪಾಳಂ, ಡಾ.ಲಕ್ಷ್ಮಿದೇವಿ ಗೋಪಿನಾಥ್, ರಾಜೇಶ್ ಭದ್ರಾವತಿ, ಎಸ್.ದತ್ತಾತ್ರಿ, ಎಚ್.ಎಸ್.ಮೋಹನ್, ಅ.ನ.ವಿಜಯೇಂದ್ರರಾವ್ ಇದ್ದರು.