ಜನರ ನಂಬಿಕೆ, ವಿಶ್ವಾಸ ಗಟ್ಟಿಗೊಳಿಸಿ

1-klr-3
Published on

ಕೋಲಾರ: ಪತ್ರಿಕೆಗಳ ಮೇಲೆ ಜನತೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪತ್ರಕರ್ತರು ವೃತ್ತಿಧರ್ಮ ಮೆರೆಯಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಂ.ಜಿ. ಪ್ರಭಾಕರ್ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೋಲಾರ, ಚಿಕ್ಕಬಳ್ಳಾಪುರ ಪತ್ರಕರ್ತರ ಸಹಕಾರ ಸಂಘದಿಂದ ಪತ್ರಕರ್ತರ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಪತ್ರಿಕಾರಂಗಕ್ಕೆ ಪ್ರಜಾಪ್ರಭುತ್ವ ನಾಲ್ಕನೇ ಅಂಗವಾಗಿ ಧ್ವನಿ ಇಲ್ಲದವರ ಪ್ರತಿನಿಧಿಯಾಗಿ ಕೆಲಸ ಮಾಡುವ ಸ್ವಾತಂತ್ರ ಸಿಕ್ಕಿದೆ. ಇದನ್ನು ಹಾಳುಮಾಡಿಕೊಳ್ಳಬಾರದು ಎಂದರು.

ಇಂದು ಪತ್ರಿಕೆಗಳಿಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ವಾಟ್ಸ್‌ಆ್ಯಪ್, ಫೇಸ್‌ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳ ನಡುವೆಯೂ ಜನರಿಗೆ ಪತ್ರಿಕೆಗಳ ಮೇಲಿನ ನಂಬಿಕೆ ಪೂರ್ತಿಯಾಗಿ ಹೋಗಿಲ್ಲ. ವೃತ್ತಿ ಧರ್ಮ ಬಿಟ್ಟು ಕವಲು ದಾರಿಯಲ್ಲಿ ಹೋಗುವುದು ಬೇಡ, ಸೌಲಭ್ಯ, ಉತ್ತೇಜನಕ್ಕೆ, ಸ್ವಂತ ಲಾಭಕ್ಕೆ ಪತ್ರಕರ್ತ ಎಂದು ಲೇಬಲ್ ಹಾಕಿಕೊಳ್ಳುವ ಅಗತ್ಯವಿಲ್ಲ. ಪವಿತ್ರವಾದ ಕ್ಷೇತ್ರದಲ್ಲಿ ದೈನೇಸಿ ಮನೋಭಾವ ಬೇಡ ಎಂದು ಕಿವಿಮಾತು ಹೇಳಿದರು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ಪತ್ರಿಕೋದ್ಯಮ ಅನೇಕ ಸವಾಲು, ಸಂಕಷ್ಟಗಳನ್ನು ಎದುರಿಸುತ್ತಿದೆ. ಜನರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುವ ಅತಿ ದೊಡ್ಡ ಸವಾಲನ್ನು ಎಚ್ಚರಿಕೆಯಿಂದ ಎದುರಿಸದಿದ್ದರೆ ಪತ್ರಿಕೆ, ಮಾಧ್ಯಮ ಸವಕಲು ನಾಣ್ಯವಾಗುತ್ತದೆ. ಸಮಾಜಕ್ಕೆ ಎಂತಹ ಸುದ್ದಿಯನ್ನು ಕೊಡಬೇಕು ಎಂಬುದನ್ನು ಜವಾಬ್ದಾರಿಯುತ ಪತ್ರಕರ್ತರು ಆಲೋಚನೆ ಮಾಡಿ ಸುದ್ದಿಗೆ ಮಹತ್ವ ನೀಡಬೇಕು. ಈ ನಿಟ್ಟಿನಲ್ಲಿ ನಮ್ಮನ್ನು ನಾವು ಸರಿಪಡಿಸಿಕೊಳ್ಳಬೇಕಾದರೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಕರೊನಾದಿಂದ ಮೃತರಾದ ಪತ್ರಕರ್ತರ ಕುಟುಂಬಕ್ಕೆ ರಾಜ್ಯ ಸಂಘದಿಂದ 5,000 ರೂ. ಘೋಷಣೆ ಮಾಡಿದಾಗ ಜಿಲ್ಲಾ ಸಂಘದಿಂದ 10,000 ರೂ. ನೀಡುತ್ತದೆ, ಮೊತ್ತ ಹೆಚ್ಚಿಸಬೇಕೆಂಬ ನಮ್ಮ ಒತ್ತಾಯಕ್ಕೆ ಸಹಮತ ಅಧ್ಯಕ್ಷರ ಒಪ್ಪಿದ್ದಾರೆ. ಜಿಲ್ಲೆಯಲ್ಲೂ ಮೂವರು ಪತ್ರಕರ್ತರು ಮೃತರಾಗಿದ್ದು, ಅವರ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಾಗುವುದು. ನನ್ನ ಅವಧಿಯಲ್ಲಿ ಪತ್ರಕರ್ತರ ಅನಾರೋಗ್ಯ ಇನ್ನಿತರ ಕಾರಣಗಳಿಗೆ 5 ಲಕ್ಷ ರೂ. ಅಧಿಕ ಪರಿಹಾರ ನೀಡಲಾಗಿದೆ ಎಂದು ಜಿ.ಮುನಿರಾಜು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ವಿಜಯವಾಣಿ ಹಿರಿಯ ವರದಿಗಾರ ಪಾ.ಶ್ರೀ ಅನಂತರಾಮ್, ಪದಾಧಿಕಾರಿ ಎಂ.ವಿ. ರವೀಂದ್ರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕವಿ ಡಾ.ಸಿದ್ಧಲಿಂಗಯ್ಯ, ಜಿಲ್ಲೆಯ ಪತ್ರಕರ್ತರಾದ ವೆಂಕಟೇಶ್, ಎಂ.ವಿ. ರವಿ ,ಎನ್.ಎಸ್.ಮೂರ್ತಿ ನಿಧನಕ್ಕೆ ಮೌನ ಆಚರಿಸಲಾಯಿತು.

ಕರೊನಾ ಸಂಬಂಧ ಜು. 5ರವರೆಗೆ ಸಭೆ, ಸಮಾರಂಭಕ್ಕೆ ನಿಬಂಧನೆಗಳಿರುವುದರಿಂದ ಸರಳವಾಗಿ ಅಚರಿಸಲಾಗಿದೆ. ಮುಂದಿನ 15 ದಿನದೊಳಗೆ ಪತ್ರಕರ್ತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ, ಪತ್ರಕರ್ತರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗುವುದು. ಜಿ.ಮುನಿರಾಜು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net