ಜನರ ನಂಬಿಕೆ ಉಳಿಸಿ ಉತ್ತಮ ಕೆಲಸ ಮಾಡಿದ ತೃಪ್ತಿ : ಹರಿರಾಮ್ ಶಂಕರ್

ಜನರ ನಂಬಿಕೆ ಉಳಿಸಿ ಉತ್ತಮ ಕೆಲಸ ಮಾಡಿದ ತೃಪ್ತಿ : ಹರಿರಾಮ್ ಶಂಕರ್
Published on

ಹಾಸನ: ಜಿಲ್ಲೆಯಲ್ಲಿ 14 ತಿಂಗಳು ಎಸ್‌ಪಿಯಾಗಿ ಜನರು ನನ್ನ ಮೇಲೆ ಇಟ್ಟಿದಂತಹ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಅತೃಪ್ತಿ ನನಗಿದೆ. ಎಂದು ನಿರ್ಗಮಿತ ಎಸ್‌ಪಿ.ಹರಿರಾಂ ಶಂಕರ್ ತಿಳಿಸಿದರು .

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಮತ್ತು ಜನಸ್ನೇಹಿ ಆಡಳಿತ ನೀಡುವ ದೃಷ್ಟಿಯಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ನಾನು ಜಿಲ್ಲೆಗೆ ಬಂದ ದಿನದಿಂದ ಇಲ್ಲಿಯವರೆಗೆ ಸಾಕಷ್ಟು ಕಾನೂನು ಸುವ್ಯವಸ್ಥೆ ಹಾಗೂ ಆಡಳಿತದಲ್ಲಿ ಬದಲಾವಣೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನ ಜಾರಿಗೆ ತರುವ ಸಂದರ್ಭದಲ್ಲಿ ಮೇಲಾಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು, ಪತ್ರಕರ್ತರು ಸಂಪೂರ್ಣ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 40 ಜನ ಡಿ.ಆರ್.ಸಿಬ್ಬಂದಿಗಳನ್ನು ಬಳಸಿಕೊಂಡು ಹಲವು ಠಾಣೆಗಳಿಗೆ ದೂರು ಸಲ್ಲಿಸಲು ಕಳುಹಿಸಿ ಈ ಸಂದರ್ಭದಲ್ಲಿ ಅನುಚಿತ ವರ್ತನೆ, ಪ್ರಕರಣ ದಾಖಲಿಸಲು ವಿಳಂಬ ಸೇರಿದಂತೆ ಇನ್ನಿತರೆ ಆರೋಪದ ಅಡಿಯಲ್ಲಿ ಸುಮಾರು 15 ರಿಂದ 16 ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡು, ಒಬ್ಬರ ಮೇಲೆ ಪ್ರಕರಣ ದಾಖಲು ಮಾಡುವಂತಹ ಕೆಲಸವನ್ನು ಕೂಡ ಮಾಡಿದ್ದೇನೆ ಎಂದು ಹೇಳಿದರು.

ಹಾಸನದಲ್ಲಿ ಚುನಾವಣೆ ಎಂದರೆ ಯುದ್ಧನ ವಾತಾವರಣ ಎಂದು ಕರೆಯಬಹುದು, ಇಂತಹ ಸಂದರ್ಭದಲ್ಲಿ ಕಳೆದ ಬಾರಿ ವಿಧಾನಸಭಾ ಚುನಾವಣೆ ಜಿಲ್ಲೆಯಲ್ಲಿ ನಾಲ್ಕೈದು ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿತ್ತು .ಎಲ್ಲಿಯೂ ಕೂಡ ಸಣ್ಣ ಲೋಕವಾಗದಂತೆ ಇಲಾಖೆಯಿಂದ ಸೂಕ್ತ ಬಂದೋಬಸ್ ವ್ಯವಸ್ಥೆಯನ್ನು ಮಾಡಲಾಯಿತ್ತು.ಕಲ್ಪಿಸಿಕೊಡಲಾಗಿತ್ತು ಇಲಾಖೆಯ ಎಲ್ಲಾ ಸಿಬ್ಬಂದಿಗಳ ಸಹಕಾರ ಪ್ರಮುಖವಾದದ್ದು ಎಂದು ಹೇಳಿದರು.

ಸರ್ಕಾರಿ ವ್ಯವಸ್ಥೆಯಲ್ಲಿ ವರ್ಗಾವಣೆ ಸರ್ವೇಸಾಮಾನ್ಯ ನನ್ನ ವರ್ಗಾವಣೆಯಿಂದ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ ಎಂಬ ಭಾವನೆ ನನಗಿದೆ. ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಹಾಸನದಲ್ಲಿ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಂಡಿದ್ದೇನೆ. ಅಲ್ಲದೆ ಜಿಲ್ಲೆಯಲ್ಲಿ ಕಳೆದ 12 ವರ್ಷಗಳಿಂದ ನಾಪತ್ತೆಯಾಗಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಒಂದು ತಿಂಗಳಲ್ಲಿ ಸುಮಾರು 55ಕ್ಕೂ ಹೆಚ್ಚು ಜನರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಈಗ ಜಿಲ್ಲೆಗೆ ಬಂದಿರುವಂತಹ ನೂತನ ಪೊಲೀಸ್ ವರಿಷ್ಠಾಧಿಕಾರಿಗಳು ಇನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಲಿ ಅವರಿಗೂ ಕೂಡ ಜಿಲ್ಲೆಯ ಜನರು ಮತ್ತು ಪತ್ರಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಲಿ ಎಂದು ಮನವಿ ಮಾಡಿದರು

ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಹೆಚ್.ಬಿ .ಮದನ್‌ಗೌಡ ಅವರು ಮಾತನಾಡಿ, ಹರಿರಾಂ ಶಂಕರ್ ಅವರು ಹಾಸನಕ್ಕೆ ಬಂದು ಹದಿನಾಲ್ಕು ತಿಂಗಳು ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಪೋಲಿಸ್ ಇಲಾಖೆಯ ಕೆಳ ಅಧಿಕಾರಿಗಳನ್ನು ಪಳಗಿಸುವ ಕೆಲಸವನ್ನು ಹೆಚ್ಚು ಜವಬ್ದಾರಿಯಿಂದ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಉನ್ನತ ಅಧಿಕಾರಿಯಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ಅಧಿಕಾರಿಗಳಿಗೆ ಮಾನವೀಯತೆ ಎಲ್ಲಿಯವರೆಗೂ ಇರುತ್ತದೆಯೋ ಅಲ್ಲಿಯವರೆಗೂ ಅವರಿಗೆ ಯಶಸ್ಸು ಇದ್ದೇ ಇರುತ್ತದೆ. ಯಶಸ್ಸಿನ ಹಿಂದೆ ಹೋದವನು ಗೆಲುವನ್ನು ಕಾಣಲಾರ. ಹರಿರಾಂ ಶಂಕರ್ ಅವರು ಇದ್ದಷ್ಟು ದಿನ ಜಿಲ್ಲೆಯಲ್ಲಿ ಮಾದರಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಈ ವೇಳೆ ಹಲವು ಪತ್ರಕರ್ತರು ಮಾತನಾಡಿ,ಹರಿರಾಂ ಶಂಕರ್ ಅವರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಣ್ಣ ಪತ್ರಿಕೆ ಸಂಘದ ರಾಜ್ಯಾಧ್ಯಕ್ಷ ಜೆ.ಆರ್.ಕೆಂಚೆಗೌಡ, ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಿರಿಯ ಕಿರಿಯ ಪತ್ರಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net