ಜನರ ಧ್ವನಿಯಾಗಿ ಕೆಲಸ ಮಾಡಲು ಸಹಕಾರ ನೀಡಿ

NPK (1)
ನೆಲಜಿ ದವಸ ಬಂಡಾರದ ಕಟ್ಟಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ, ಮಂಡೆಪಂಡ ಸುಜಾಕುಶಾಲಪ್ಪ, ರಾಣಿ ಮಾಚಯ್ಯ, ಕೂಪದಿರ ಶಾರದಾ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.
Published on

ನಾಪೋಕ್ಲು: ಜನ ಬೆಂಬಲವಿದ್ದರೆ ಮಾತ್ರ ಒಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸಾಧ್ಯ. ಅಂತೆಯೇ ಜನರ ಧ್ವನಿಯಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ನೆಲಜಿ ಗ್ರಾಮದ ಅಂಬಲ ಮಹಿಳಾ ಸಮಾಜ ವತಿಯಿಂದ ಇತ್ತೀಚೆಗೆ ನೆಲಜಿ ದವಸ ಬಂಡಾರದ ಕಟ್ಟಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಸಕನಾಗಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಜನರ ಮನಸ್ಸಿನಲ್ಲಿ ಉಳಿಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.

ಜನರು ಮತ್ತು ಕ್ಷೇತ್ರದ ಅಭಿವೃದ್ಧಿ ಆಗಬೇಕು ಎಂಬುದಷ್ಟೇ ನನ್ನ ಗುರಿ. ರಾಜಕೀಯ ಕ್ಷೇತ್ರದಲ್ಲಿ ಹಲವರು ಅವರವರ ಸಾಮರ್ಥ್ಯದಿಂದ ಮೇಲೆ ಬಂದಿದ್ದಾರೆ. ಶಾಸಕನಾಗಿ ಜಿಲ್ಲೆಯ ಜನರಿಗೆ ಒಳಿತನ್ನು ಮಾಡುವುದಷ್ಟೇ ನನ್ನ ಕೆಲಸ. ಅಲ್ಲದೆ ಮುಂದಿನ ಜನಾಂಗಕ್ಕೆ ಕೊಡಗಿನ ಆಚಾರ, ವಿಚಾರ, ಭಾಷೆ , ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಚಿಂತಿಸುವ ಕಾಲ ಬಂದಿದೆ. ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಿ ಮುಂದಡಿ ಇಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾಕುಶಾಲಪ್ಪ, ಕೊಡಗಿನ ನೆಲ, ಜಲ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಮಾತನಾಡಿ, ಕೊಡವ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಹಿರಿಯರೊಂದಿಗೆ ಸೇರಿ ಮಕ್ಕಳು ಕಲಿಯಬೇಕು. ನಂತರ ಅದನ್ನು ನಿರಂತರವಾಗಿ ಸಂರಕ್ಷಿಸಬೇಕು. ಹುತ್ತರಿ, ಕೈಲ್ ಮುಹೂರ್ತ, ಕಾವೇರಿ ಸಂಕ್ರಮಣದಂತಹ ಹಬ್ಬಗಳನ್ನು ಮಕ್ಕಳು ಹಿರಿಯರೊಂದಿಗೆ ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಹೇಳಿದರು.

ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ, ವಿರಾಜಪೇಟೆಯ ವುಮೆನ್ಸ್ ವಿಂಗ್ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿದರು. ಇದಕ್ಕೂ ಮುನ್ನ ಕಕ್ಕಡ ಹಬ್ಬದ ಪ್ರಯುಕ್ತ ನೆಲಜಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಆ ಬಳಿಕ ದುಡಿ ಕೊಟ್ಟು ತಳಿಯಕ್ಕಿ ಬೋಲಾಕ್‌ನೊಂದಿಗೆ ಅತಿಥಿಗಳನ್ನು ಅದ್ದೂರಿಯಾಗಿ ಸಭೆಗೆ ಸ್ವಾಗತಿಸಲಾಯಿತು.

ಅಂಬಲ ಮಹಿಳಾ ಸಮಾಜದ ಅಧ್ಯಕ್ಷೆ ಅಪ್ಪುಮಣಿಯಂಡ ಡೇಝಿ ಸೋಮಣ್ಣ, ಕಾಫಿ ಬೆಳೆಗಾರರಾದ ಮಂಡೀರ ಸರೋಜಾ ದೇವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಸಲಹಾ ಸಮಿತಿ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಳಿಯಪ್ಪ, ಮಣವಟ್ಟಿರ ಕಮಲ ಬೆಳ್ಳಪ್ಪ, ಮಣವಟ್ಟಿರ ಝಾನ್ಸಿ ತಿಮ್ಮಯ್ಯ ,ಕೋಟೆರ ಹೇಮಾ ಕಾವೇರಪ್ಪ ,ಚೀಯಕಪೂವಂಡ ಅಮಿತ ನವೀನ್, ಅಲ್ಲರಂಡ ಪ್ರೀತು ಸತೀಶ್, ಡೇಝಿ ಸೋಮಣ್ಣ, ಮೀರಾ ಬಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net