

ಹೊಳೆಹೊನ್ನೂರು: ಕಳೆದ ಬಾರಿ ನಮ್ಮ ಅವಧಿಯಲ್ಲಿ ಅನುಷ್ಠಾನವಾದ ಕಾಮಗಾರಿಗಳ ಹೆಸರು ಬಳಸಿಕೊಂಡು ಬಿಜೆಪಿ ಮುಖಂಡರು ಕ್ಷೇತ್ರದ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಶಾಸಕಿ ಶಾರದ ಪೂರ‌್ಯಾನಾಯ್ಕಾ ಆರೋಪಿಸಿದರು.
ಸಮೀಪದ ಸೈದರಕಲ್ಲಹಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಾಂತರದಲ್ಲಿ ಕಳೆದ ಬಾರಿ ಹಾಗೂ ಈ ಬಾರಿ ಯಾವೆಲ್ಲಾ ಜನಪರ ಅಭಿವೃದ್ಧಿ ಯೋಜನೆಗಳು ಅನುಷ್ಠಾನವಾಗಿವೆ ಎನ್ನುವುದನ್ನು ಕ್ಷೇತ್ರದ ಜನ ನೋಡುತ್ತಿದ್ದಾರೆ. ಕ್ಷೇತ್ರಕ್ಕೆ ನನ್ನ ಕೊಡುಗೆಯನ್ನು ಜನ ಎಂದಿಗೂ ಮರೆಯುವ ಮಾತಿಲ್ಲ. ಕಳಪೆ ಕಾಮಗಾರಿಗಳಿಂದಾಗಿ ಗ್ರಾಮಾಂತರದ ಅಭಿವೃದ್ದಿಗೆ ಹಿನ್ನಡೆಯಾಗುತ್ತಿದೆ. ಪ್ರಾದೇಶಿಕ ಪಕ್ಷ ನೀಡುವ ರೈತರ ಯೋಜನೆಗಳಿಂದ ರಾಜ್ಯಕ್ಕೆ ಅನುಕೂಲವಾಗುವುದರಲ್ಲಿ ಎರಡು ಮಾತಿಲ್ಲ. ಗ್ರಾಮಾಂತರ ಸಂಚಾರದಲ್ಲಿ ಜನತೆ ಪಕ್ಷ ಬೇಧ ಮರೆತು ಸಹಕಾರ ನೀಡುತ್ತಿರುವುದುನ್ನು ನೋಡಿದರೆ ಈ ಬಾರಿ ಕ್ಷೇತ್ರದ ಜನತೆ ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಸಿದ್ಲಿಪುರ ಸತೀಶ್ ಮಾತನಾಡಿ, ಗ್ರಾಮಾಂತರದ ಸಾರಿಗೆ ಸಮಸ್ಯೆಯನ್ನು ಸರಿಪಡಿಸಲಾಗದ ಶಾಸಕರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು ಕಾರ್ಯಕರ್ತರ ಪಕ್ಷ ಸೇಪರ್ಡೆಯಿಂದಾಗಿ ಕಲ್ಲಿಹಾಳ್ ಹಾಗೂ ಆನವೇರಿ ಜಿಪಂ ವ್ಯಾಪ್ತಿಯಲ್ಲಿ ಜೆಡಿಎಸ್ ಬಲಿಷ್ಠವಾಗುತ್ತಿದೆ ಎಂದರು.