

ತುಮಕೂರು : ಕರೊನಾ ನಿಯಂತ್ರಿಸುವಲ್ಲಿ ಎಡವಿರುವ ರಾಜ್ಯ ಸರ್ಕಾರ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ಈ ಬೇಜವಾಬ್ದಾರಿತನದಿಂದ ಸಾವಿನ ಸಂಖ್ಯೆ ಜಾಸ್ತಿಯಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಹಾಸನ ಸಂಸದ ಪ್ರಜ್ವಲ್‌ರೇವಣ್ಣ ಹೇಳಿದರು.
ಹಿರೇಹಳ್ಳಿಯಲ್ಲಿ ಆಟೋ ಚಾಲಕರು, ಹೊನ್ನುಡಿಕೆ-ಹೆಬ್ಬೂರಿನಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಿರ್ಗತಿಕರಿಗೆ 5000 ಉಚಿತ ಆಹಾರ ಕಿಟ್, ತರಕಾರಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾ ಸೋಂಕಿತರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾದ ಪರಿಣಾಮ ಎಷ್ಟೋ ಜನ ಅನಾಥರಾಗಿದ್ದಾರೆ ಎಂದರು.
ಫ್ರಂಟ್‌ಲೈನ್ ಸೇನಾನಿಗಳು ಎಂದು ಪರಿಗಣಿಸಿರುವ ಆಶಾ ,ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಯಾವ ಸೌಲಭ್ಯ ನೀಡಿದೆ. ಆಶಾ ಕಾರ್ಯಕರ್ತೆಯರಿಗೆ ಮಾಸಾಶನ ನೀಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಿಲ್ಲ. ಆದರೂ, ಅವರ ಬಳಿ ಸೇವೆ ಮಾಡಿಸಿಕೊಳ್ಳಲಾಗುತ್ತಿದೆ. ಅವರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅವರ ಕುಟುಂಬಗಳಿಗೆ ಯಾರು ದಿಕ್ಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಮಾದರಿ ಕೆಲಸ: ಕರೊನಾ ಸಂಕಷ್ಟ ಕಾಲದಲ್ಲಿ ರೈತರು ಹಾಗೂ ಕ್ಷೇತ್ರದ ಜನರನ್ನು ಉಳಿಸುವ ಮಾದರಿ ಕೆಲಸವನ್ನು ಶಾಸಕ ಡಿ.ಸಿ.ಗೌರಿಶಂಕರ್ ಮಾಡುತ್ತಿದ್ದಾರೆ. ಇಂತಹ ಕೆಲಸವನ್ನು ರಾಜ್ಯದ ಎಲ್ಲ ಶಾಸಕರೂ ಮಾಡಿದ್ದರೆ ರಾಜ್ಯದಲ್ಲಿ ಹೆಚ್ಚು ಸಾವು ನೋವು ಸಂಭವಿಸುತ್ತಿರಲಿಲ್ಲ ಎಂದು ಪ್ರಜ್ವಲ್ ಹೇಳಿದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಕರೊನಾ ಕಷ್ಟ ಕಾಲದಲ್ಲಿ ರಾಜಕೀಯ ಮಾಡುವುದಿಲ್ಲ. ಕ್ಷೇತ್ರದ ಜನತೆ ಶಾಸಕ ಸ್ಥಾನದ ಭಿಕ್ಷೆ ನೀಡಿದ್ದಾರೆ, ಅವರ ಖುಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಏನೇ ಕಷ್ಟ ಬಂದರೂ ಕ್ಷೇತ್ರದ ಜನರನ್ನು ಕಾಪಾಡಿ ಕರೊನಾನಮುಕ್ತ ಕ್ಷೇತ್ರ ಮಾಡುವುದೇ ನನ್ನ ಮುಖ್ಯ ಗುರಿ ಎಂದರು.
ಹೊನ್ನುಡಿಕೆ ಜಿಪಂ ಉಸ್ತುವಾರಿ ಪಾಲನೇತ್ರಯ್ಯ, ವಿಷ್ಣುವರ್ಧನ್, ತನ್ವೀರ್ ರೆಹಮಾನ್ ಖಾನ್, ಸುವರ್ಣಗಿರಿಕುಮಾರ್, ಬೆಳಗುಂಬ ವೆಂಕಟೇಶ್, ಸಿರಾಕ್ ರವೀಶ್, ಹರಳೂರು ಸುರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ್, ಹೊನಸಿಗೆರೆರುದ್ರೇಶ್ ಇದ್ದರು.
1 ಲಕ್ಷ ಸಸಿ ನೆಡುವ ಗುರಿ : ಗ್ರಾಮಾಂತರ ಕ್ಷೇತ ್ರವ್ಯಾಪ್ತಿಯಲ್ಲಿ ಒಂದು ಲಕ್ಷದ ಒಂದು ಸಸಿ ನೆಡುವ ಗುರಿ ಹೊಂದಲಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ಪ್ರತಿಯೊಬ್ಬರೂ ಮನೆಗೊಂದು ಗಿಡ ನೆಟ್ಟರೆ ಕರೊನಾದಂತಹ ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಲು ಶುದ್ಧಗಾಳಿ ದೊರೆಯುತ್ತದೆ ಎಂದು ಡಿ.ಸಿ.ಗೌರಿಶಂಕರ್ ಹೇಳಿದರು.
ರಾಜ್ಯ ಸರ್ಕಾರವು ಅಧಿಕಾರಿಗಳ ಮೇಲೆ ಹಿಡಿತ ಹೊಂದಿಲ್ಲ. ಕರೊನಾ ಸಂಕಷ್ಟ ಕಾಲದಲ್ಲಿ ಅಧಿಕಾರಿಗಳ ತಿಕ್ಕಾಟ ಸೂಕ್ತವಾದುದಲ್ಲ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇಂತಹ ಕಷ್ಟದ ಕಾಲದಲ್ಲಿ ಸಾರ್ವಜನಿಕರ ದುಡ್ಡಿನಲ್ಲಿ ಸ್ವಿಮ್ಮಿಂಗ್‌ಪೂಲ್ ನಿರ್ಮಾಣಕ್ಕೆ ದುಂದು ವೆಚ್ಚ ಮಾಡಬಾರದು. ಇಂತಹ ಧೋರಣೆ ಪ್ರದರ್ಶಿಸಬಾರದು. ಪ್ರಜ್ವಲ್ ರೇವಣ್ಣ ಸಂಸದ