ಜನರ ಕೆಲಸ ಕಡೆಗಣಿಸಿದರೆ ಸಸ್ಪೆಂಡ್

SMG - BELURU CONG.JPG
Published on

ಸಾಗರ: ತಾಲೂಕು ಕಚೇರಿಯಲ್ಲಿ ಜನರ ಕೆಲಸ ಆಗುತ್ತಿಲ್ಲ. ಜನರನ್ನು ಸತಾಯಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಸಾರ್ವಜನಿಕರಿಗೆ ನಾಳೆ ಬಾ ಎಂದು ಹೇಳಿ ಕಳುಹಿಸುತ್ತಿದ್ದೀರಿ. ನಾಳೆ ಬಾ ಎಂದು ಒಂದು ಬೋರ್ಡ್ ಹಾಕಿ. ನಿಮ್ಮಿಂದ ಕೆಟ್ಟ ಹೆಸರು ಬರುತ್ತಿದೆ ಎಂದು ಅಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹರಿಹಾಯ್ದರು.

ಸಾಗರದಲ್ಲಿ ಎಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ, ನಗರಸಭೆ ಸೇರಿ ವಿವಿಧ ಇಲಾಖೆ ಅಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂದರೆ ಇತರ ಇಲಾಖೆಗಳಲ್ಲೂ ಇದೇ ಸ್ಥಿತಿಯಾಗಿದೆ ಎಂದರು.

ಸಾರ್ವಜನಿಕರ ಕೆಲಸಕ್ಕೆ ಲಂಚ ಪಡೆಯಲಾಗುತ್ತಿದೆ ಎಂಬ ದೂರಿದೆ. ಆಧಾರ್, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ ಸೇರಿ ಯಾವುದೂ ನಿಗದಿತ ಸಮಯಕ್ಕೆ ಸಿಗುತ್ತಿಲ್ಲ. ಗ್ರಾಮ ಲೆಕ್ಕಿಗರು ಕರೆ ಸ್ವೀಕರಿಸುವುದಿಲ್ಲ. ಸಾರ್ವಜನಿಕರ ಕೆಲಸ ಮಾಡಲು ಆಗುವುದಿಲ್ಲ ಎಂದಾದರೆ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಇಲ್ಲವಾದರೆ ಸಸ್ಪೆಂಡ್ ಮಾಡಲು ಸಂಬಂಸಿದ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಯಾವ ಕಾರಣಕ್ಕೂ ಕರ್ತವ್ಯಲೋಪ ಸಹಿಸುವುದಿಲ್ಲ. ಮುಂದೆ ಇಂತಹ ವಿಳಂಬ ನಡೆಯದಂತೆ ಕ್ರಮ ಕೈಗೊಳ್ಳಿ ಎಂದು ತಹಸೀಲ್ದಾರ್‌ಗೆ ಸೂಚನೆ ನೀಡಿದರು. ತಾಲೂಕು ಆಡಳಿತ ಇಲಾಖೆಗಳ ಜತೆ ಸಮನ್ವಯ ಸಾಸಿ ಕೆಲಸ ಮಾಡಬೇಕು. ಸಭೆ ಕರೆದಾಗ ಸಬೂಬು ಹೇಳಿ ತಪ್ಪಿಸಿಕೊಳ್ಳಬೇಡಿ. ಶೀಘ್ರ ಕ್ರಮ ಕೈಗೊಳ್ಳಿ ಎಂದರು.

ದೀಪಾವಳಿ ನಂತರ ಮಾರುಕಟ್ಟೆ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ಸಿಗಲಿದೆ. ಬಗರ್‌ಹುಕುಂ, 94ಸಿ ಮತ್ತು 94ಸಿಸಿ ಅಡಿ ಅರ್ಹರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಬೇಕು. ದೀಪಾವಳಿ ಹತ್ತಿರವಿರುವ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ಸ್ವಚ್ಛತೆಗೆ ಸಹಕರಿಸಬೇಕು ಎಂದು ಸೂಚಿಸಿದರು.

ಸಾಗರ ಎಸಿ ವೀರೇಶ್‌ಕುಮಾರ್, ತಹಸೀಲ್ದಾರ್ ರಶ್ಮಿ, ಪೌರಾಯುಕ್ತ ನಾಗಪ್ಪ, ತಾಪಂ ಇಒ ಶಿವಪ್ರಕಾಶ್, ಟಿ.ಪಿ.ರಮೇಶ್, ಕೆ.ಹೊಳೆಯಪ್ಪ, ಗುರುಕೃಷ್ಣ ಶೆಣೈ, ಶಾಂತಾಮೂರ್ತಿ ಇತರರಿದ್ದರು.

ಹೊಸನಗರಕ್ಕೆ ತಹಸೀಲ್ದಾರ್

ಸಾಗರ ಮತ್ತು ಹೊಸನಗರ ತಾಲೂಕು ಎರಡನ್ನೂ ಒಬ್ಬರೇ ತಹಸೀಲ್ದಾರರು ನಿಭಾಯಿಸುವುದು ಕಷ್ಟ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಹಬ್ಬ ಮುಗಿದ ನಂತರ ಹೊಸನಗರಕ್ಕೆ ನೂತನ ತಹಸೀಲ್ದಾರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net