

ಬೇಲೂರು: ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಕುಂದುಕೊರತೆಗಳಿಗೆ ಸಿಬ್ಬಂದಿ ತಕ್ಷಣ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.
ಪುರಸಭೆ ವ್ಯಾಪ್ತಿಯ 10 ಮತ್ತು 11ನೇ ವಾರ್ಡ್‌ಗಳಿಗೆ ಸಿಬ್ಬಂದಿಯೊಂದಿಗೆ ಶುಕ್ರವಾರ ತೆರಳಿ ಆಗಬೇಕಿರುವ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಸ್ಥಳೀಯರಿಂದ ಕುಂದು ಕೊರತೆಗಳ ಅಹವಾಲು ಸ್ವೀಕರಿಸಿ ಮಾತನಾಡಿದರು.
ಸಾರ್ವಜನಿಕರು ವಾರ್ಡ್‌ಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳಿದ್ದರೂ ಮಧ್ಯವರ್ತಿಗಳನ್ನು ಹೊರತುಪಡಿಸಿ ನೇರವಾಗಿ ನಮ್ಮನ್ನು ಭೇಟಿಯಾಗಿ ಬಗೆಹರಿಸಿಕೊಳ್ಳಬಹುದಾಗಿದೆ. ಅಲ್ಲದೆ 10 ಮತ್ತು 11ನೇ ವಾರ್ಡ್‌ನಲ್ಲಿ ಮೂಲಸೌಕರ್ಯಗಳಾದ ಒಳಚರಂಡಿ, ರಸ್ತೆ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಅವರ ನಿರೀಕ್ಷೆಯಂತೆ ಈ ಎರಡು ವಾರ್ಡ್‌ಗಳಿಗೆ ಶೀಘ್ರದಲ್ಲಿ ಕೆಲಸ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಪುರಸಭೆಯ 23 ವಾರ್ಡ್‌ಗಳಲ್ಲೂ ಒಳಚರಂಡಿ ಸಂಪರ್ಕ ಕಲ್ಪಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಹತ್ತನೇ ವಾರ್ಡ್‌ನ ಭೂಕನಕಟ್ಟೆಗೆ ಒಳಚರಂಡಿ ನೀರು ಹರಿದು ಬರುವ ಬಗ್ಗೆ ಸದಸ್ಯರು ಗಮನಕ್ಕೆ ತಂದಿದ್ದು ತಕ್ಷಣವೆ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ್ ಮಾತನಾಡಿ, ಸ್ವಚ್ಛತೆಯಲ್ಲಿ ನಿರಂತರವಾಗಿ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತಿದ್ದಾರೆ. ಆದರೆ ಸಾರ್ವಜನಿಕರು ಪಟ್ಟಣದ ಎಲ್ಲೆಂದರಲ್ಲಿ ಕಸ ಹಾಕದಂತೆ ಮನವಿ ಮಾಡಿದರು. ಪುನಃ ಅದೇ ರೀತಿ ಹಾಕಿ ಪಟ್ಟಣದ ಸೌಂದರ್ಯ ಹಾಳು ಮಾಡುತ್ತಿದ್ದಾರೆ. ಕಸ ಸುರಿಯುತ್ತಿರುವುದು ಕಂಡು ಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು. ಮತ್ತು ಮುರಿದ ವಿದ್ಯುತ್ ಕಂಬ ಸೇರಿದಂತೆ ಚರಂಡಿಗಳ ಸ್ಲ್ಯಾಬ್‌ಗಳ ದುರಸ್ತಿಗೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದರೆ ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಲಿದ್ದೇವೆ ಎಂದರು.
ಉಪಾಧ್ಯಕ್ಷೆ ಜಮೀಲಾ ತೌಫಿಕ್, ಸದಸ್ಯರಾದ ಎ.ಆರ್.ಅಶೋಕ್, ರತ್ನಕ್ಕ, ಅಶೋಕ್ ನಾಯಕ್, ಪುರಸಭೆ ಆರೋಗ್ಯಾಧಿಕಾರಿ, ಲೋಹಿತ್, ಜ್ಯೋತಿ ಇತರರು ಇದ್ದರು.