ಜನರ ಕಲ್ಯಾಣಕ್ಕೆ ಹಗಲಿರುಳು ಪಣತೊಟ್ಟು ಕೆಲಸ ಮಾಡುತ್ತೇನೆ :ಎನ್.ಆರ್. ಸಂತೋಷ್

ಜನರ ಕಲ್ಯಾಣಕ್ಕೆ ಹಗಲಿರುಳು ಪಣತೊಟ್ಟು ಕೆಲಸ ಮಾಡುತ್ತೇನೆ :ಎನ್.ಆರ್. ಸಂತೋಷ್
Published on

ಅರಸೀಕೆರೆ : ಕ್ಷೇತ್ರದ ಜನರ ಕಲ್ಯಾಣಕ್ಕೆ ಮನೆಯ ಮಗನಂತೆ ಹಗಲಿರುಳು ಪಣತೊಟ್ಟು ಕೆಲಸ ಮಾಡುತ್ತೇನೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಸಹಸ್ರಾರು ಜನರೆದರು ವಾಗ್ದಾನ ಮಾಡಿದರು.

ತಾಲೂಕಿನ ಬೆಂಡೇಕೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜಾಜೂರು, ಕುರುವಂಕ ಹಾಗೂ ಬೆಂಡೇಕೆರೆ ಗ್ರಾಪಂಗಳ ಬೃಹತ್ ಮಹಿಳಾ ಸಮಾವೇಶ ಹಾಗೂ ಬಾಗಿನ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.ಬಿಜೆಪಿ ಸರ್ಕಾರ ಅಧಿಕರಕ್ಕೆ ಬಂದ ಬಳಿಕ ಕ್ಷೇತ್ರದಲ್ಲಿ ಜನರ ಕುಂದು,ಕೊರತೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ.ಇದಕ್ಕೆ ಪೂರಕ ಎನ್ನುವಂತೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್‌ರನ್ನು ಭೇಟಿ ಮಾಡಿ ಎಲ್ಲ ಕೆರೆಗಳಿಗೆ ನೀರು ಹರಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ.ವಿಧಾನಸಭಾ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಸಂಕಲ್ಪ ಮಾಡಿದ್ದು ಹಗಲಿರುಳು ವಿರಮಿಸದೇ ದುಡಿಯುವ ನನ್ನ ಹೋರಾಟಕ್ಕೆ ನೀವೆಲ್ಲರೂ ಬಲ ತುಂಬಬೇಕು ಎಂದು ಮನವಿ ಮಾಡಿದರು.

ಕಿವಿಗೊಡಬೇಡಿ-ನನ್ನ ರಾಜಕೀಯ ಏಳಿಗೆ ಸಹಿಸದ ಕೆಲವರು ಕಳೆದೆರಡು ವರ್ಷದಿಂದ ನನ್ನ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ.ಹೋದಲ್ಲಿ,ಬಂದಲ್ಲಿ ಸುಖಾ ಸುಮ್ಮನೆ ಮನಬಂದಂತೆ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಿಮ್ಮ ಮನೆಯ ಮಗನಾಗಿ ದುಡಿಯುವ ಕನಸು ಹೊತ್ತು ಬಂದಿದ್ದೇನೆ.ರಾಜಕೀಯ ವಿರೋಧಿಗಳ ಮಾತಿಗೆ ಕಿವಿಗೊಡಬೇಡಿ.ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಹೊಣೆಗಾರಿಕೆ ತಾಯಂದಿರ ಮೇಲಿದೆ. ಬರಲಿರುವ ಹತ್ತು ವರ್ಷಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ನೌಕರರನ್ನು ಹೊಂದಿದ ಕೀರ್ತಿ ತಾಲೂಕಿಗೆ ಸಲ್ಲಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದ ಜನರ ಜಲದಾಹ ಅರಿತಿರುವ ಬಿಜೆಪಿ ಸರ್ಕಾರ ಹೇಮಾವತಿ,ಯಗಚಿ ಯೋಜನೆ ಅನುಷ್ಠಾನದ ಮೂಲಕ ಕುಡಿಯುವ ನೀರಿನ ಬವಣೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ನಿಮ್ಮ ಮುಂದಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಪ್ರತಿಯೊಬ್ಬ ಅನ್ನದಾತನ ಖಾತೆಗೆ ತಲಾ 10 ಸಾವಿರ ರೂ.ಜಮಾ ಮಾಡುತ್ತಿರುವುದು ಉಭಯ ಸರ್ಕಾರಗಳ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಮನೆ ಮನೆಗೆ ಗಂಗೆ ಯೋಜನೆ ಯಾರ ಕೊಡುಗೆ ಎನ್ನುವ ಪ್ರಶ್ನೆಗೆ ರಾಜಕೀಯ ವಿರೋಧಿಗಳು ಉತ್ತರನೀಡಬೇಕಿದೆ.ಇದಲ್ಲದೇ 70 ಸಾವಿರ ಹುದೆಗಳ ಭರ್ತಿಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪ್ರಧಾನಿಗಳು ಉದ್ಯೋಗ ಮೇಳ ಆಯೋಜನೆ ಮೂಲಕ 10 ಲಕ್ಷ ನಿರುದ್ಯೋಗಿ ಯುವಕ ಯವತಿಯರಿಗೆ ಕೆಲಸ ಕೊಡಿಸಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಆಕರ್ಷಣೆ- ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಅವರನ್ನು ಗ್ರಾಮಸ್ಥರು ಭಾರಿ ಗಾತ್ರದ ಹಾರ ಹಾಕಿ ಸ್ವಾಗತಿಸಿದರು.ಹಸಿರು ಶಾಲು ಹೊದ್ದು ಎತ್ತಿನ ಗಾಡಿಯಲ್ಲಿ ಬಾರುಕೋಲು ಹಿಡಿದು ಆಗಮಿಸಿದ ಪರಿ ಎಲ್ಲರನ್ನು ಆಕರ್ಷಿಸಿತು.

ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ,ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸರ್ಕಾರ ಮೀಸಲು ಹೆಚ್ಚಿಸುವ ಮೂಲಕ ನೆರವಿಗೆ ಧಾವಿಸಿದೆ.ಸಂವಿಧಾನದ ಆಶಯದಂತೆ ನಗರಸಭೆ ಅಧ್ಯಕ್ಷ ಸ್ಥಾನ ಒಲಿದುಬಂದಿದ್ದು ಕೆಳಗಿಳಿಸುವ ಸಂಚನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತವರ ಬೆಂಬಲಿಗರು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.


ಒಬಿಸಿ ಮುಖಂಡ ವೈ.ಕೆ.ದೇವರಾಜ್ ಮಾತನಾಡಿ, ಸಣ್ಣ, ಪುಟ್ಟ ಸಮುದಾಯಗಳನ್ನು ಓಟ್ ಬ್ಯಾಂಕ್ ಮಾಡಿಕೊಂಡಿರುವ ವ್ಯಕ್ತಿಗಳಿಗೆ ತಕ್ಕಪಾಠ ಕಲಿಸುವ ಸಮಯ ಹತ್ತಿರವಾಗಿದೆ.ಚುನಾವಣೆ ವೇಳೆ ಪೊಳ್ಳು ಭರವಸೆಗಳಿಗೆ ಮಣಿಯದೇ ಹೋರಾಟಗಾರನ ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.ಮತ್ತೋರ್ವ ಮುಖಂಡ ಅಗ್ರಹಾರ ಚಂದ್ರಣ್ಣ ಮಾತನಾಡಿ, ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿದ್ದು ತನಿಖೆ ನಡೆಸಿದರೆ ಎಲ್ಲವೂ ಬಹಿರಂಗವಾಗಲಿದೆ ಎಂದರು.ಗ್ರಾಪಂ ಸದಸ್ಯ ಜಯರಾಮ್, ಭೋವಿ ಸಮಾಜದ ಮುಖಂಡ ಉಮೇಶ್,ತಾಪಂ ಮಾಜಿ ಸದಸ್ಯ ಭೋಜನಾಯ್ಕ, ಚಿಕ್ಕಮನಹಳ್ಳಿ ನಾಗರಾಜ್ ಧರ್ಮಣ್ಣ, ಮಾತನಾಡಿದರು.

ಮುಖಂಡರಾದ ಉಪೇಂದ್ರ ಚಿಕ್ಕೂರು ಗಂಗಾಧರ್,ಮೂರ್ತಿ, ಚಿಕ್ಕಬಾಣಾವರ ಸ್ವಾಮಿ ಇನ್ನಿತರರು ವೇದಿಕೆಯಲ್ಲಿದ್ದರು. ಸಂತೋಷ್ ಪತ್ನಿ ಜಾಹ್ನವಿ ಹಾಗೂ ಕುಟುಂಬ ಸದಸ್ಯರೊಂದಿಗೆ ಸಹಸ್ರಾರು ಮಹಿಳೆಯರಿಗೆ ಬಾಗಿನ ಪರಿಕರ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net