

ಚನ್ನರಾಯಪಟ್ಟಣ: ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಆಸ್ಪತ್ರೆಗಳಿಗೂ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 50 ಲಕ್ಷ ರೂ.ವೆಚ್ಚದ ಬ್ಲಾಕ್ ಮಟ್ಟದ ಸಾರ್ವಜನಿಕ ಪ್ರಯೋಗಾಲಯದ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಬಡ ಜನತೆಗೆ ಸಕಾಲಕ್ಕೆ ಆರೋಗ್ಯ ಸೇವೆಗಳು ದೊರಕಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಆಸ್ಪತ್ರೆಯ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ 13.40 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಆರೋಗ್ಯ ಸಚಿವರೊಂದಿಗೆ ಮಾತನಾಡಿ ಮಂಜೂರು ಮಾಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಮಾತನಾಡಿ, ತಾಲೂಕಿನಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ರೋಗ ನಿರ್ಣಯಕ್ಕೆ ಈ ಮೊದಲು ಹಾಸನಕ್ಕೆ ಮಾದರಿಯನ್ನು ಕಳುಹಿಸಿ ಕೊಡಬೇಕಾಗಿತ್ತು. ಆದರೆ, ಬ್ಲಾಕ್ ಮಟ್ಟದ ಸಾರ್ವಜನಿಕ ಪ್ರಯೋಗಾಲಯ ಕಾರ್ಯ ಆರಂಭಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ರಮೇಶ್ ಕುಂಬಾರಹಳ್ಳಿ, ಆರ್‌ಎಂಸಿ ನಿರ್ದೇಶಕ ಅನಿಲ್ ಮರಗೂರು, ಗುತ್ತಿಗೆದಾರ ನಾಗಪ್ಪ, ಮುಖಂಡರಾದ ಶಿವಣ್ಣ, ವೈದ್ಯರಾದ ಡಾ.ಲಕ್ಷ್ಮೀಶಂಕರ್, ಡಾ.ಚಿನ್ನ ನಾಗಪ್ಪ, ಗುರುಮೂರ್ತಿ ಇತರರು ಇದ್ದರು.