ಜನರ ಅಹವಾಲು ಸ್ವೀಕರಿಸಿದ ಡಿಸಿ

web 17chn11
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಉದ್ಘಾಟಿಸಿದರು. ತಹಸೀಲ್ದಾರ್ ಬಸವರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಪ್ರೊಬೆಷನರಿ ತಹಸೀಲ್ದಾರ್ ರೇಷ್ಮಾ ಗೌರವ್ ಇದ್ದರು.
Published on

ಚಾಮರಾಜನಗರ: ತಾಲೂಕು ಕಚೇರಿಗೆ ಅಲೆದಾಡಿದರೂ ಖಾತೆಗಳನ್ನು ನಿಗದಿತ ಅವಧಿಯೊಳಗೆ ಮಾಡಿಕೊಡಲಾಗುತ್ತಿಲ್ಲ. ಗ್ರಾಮದಲ್ಲಿರುವ ಆಸ್ಪತ್ರೆಯಲ್ಲಿ ಸಂಜೆಯವರೆಗೆ ಮಾತ್ರ ವೈದ್ಯರು ಲಭ್ಯವಿರುತ್ತಾರೆ. ಬೆಳೆ ವಿಮೆ ಯೋಜನೆ ಈ ಭಾಗದ ರೈತರಿಗೆ ತಲುಪಿಲ್ಲ. ಕೆಲ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.

ತಾಲೂಕಿನ ಉಮ್ಮತ್ತೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ದೂರುಗಳನ್ನು ಹೇಳಿದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ವಿವಿಧ ಸಮಸ್ಯೆ, ಕುಂದುಕೊರತೆಗಳನ್ನು ಗಮನಕ್ಕೆ ತಂದು ಪರಿಹರಿಸುವಂತೆ ಮನವಿ ಮಾಡಿದರು.

ಪೌತಿ ಖಾತೆಗಳು ಬಹಳಷ್ಟು ಬಾಕಿ ಉಳಿದಿವೆ. ತಾಲೂಕು ಕಚೇರಿಗೆ ಅಲೆದಾಡಿದರೂ ಖಾತೆಗಳನ್ನು ನಿಗದಿತ ಅವಧಿಯೊಳಗೆ ಮಾಡಿಕೊಡಲಾಗುತ್ತಿಲ್ಲ. ಆಟದ ಮೈದಾನ ಊರಿನಲ್ಲಿಲ್ಲ. ಹಲವು ಬಡಾವಣೆಗಳಲ್ಲಿ ಸ್ವಚ್ಛತೆ ಇಲ್ಲದಾಗಿದ್ದು ವಿವಿಧ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕೆಲವೆಡೆ ಚರಂಡಿ ಇಲ್ಲದಿರುವುದರಿಂದ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಗಮನಸೆಳೆದರು.

ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಇಲ್ಲಿಗೆ ಹಗಲು-ರಾತ್ರಿ ವೈದ್ಯರ ಸೇವೆ ಲಭಿಸಬೇಕು, ಸಮುದಾಯ ಭವನಗಳು ನಿರ್ಮಾಣ ಮಾಡಬೇಕು, ಪಂಚಾಯಿತಿಯಲ್ಲಿ ಇನ್ನಷ್ಟು ಪೌರಕಾರ್ಮಿಕರ ನೇಮಕವಾಗಬೇಕು, ರಸ್ತೆ ವಿಸ್ತರಣೆಯಾಗಬೇಕು, ಕಲ್ಯಾಣಿ ಬಳಿ ಉದ್ಯಾನವನ ನಿರ್ಮಾಣ ಮಾಡಬೇಕು. ಊರಿನ ಶಾಲೆ ಶತಮಾನ ಪೂರೈಸಿದ್ದು, ಈ ಶಾಲೆಗೆ ಇನ್ನಷ್ಟು ಸೌಕರ್ಯಗಳು ಒದಗಿಸಬೇಕು, ಕೆರೆಯಲ್ಲಿ ಹೂಳು ತೆಗೆಸಬೇಕು ಎಂದು ಕೋರಿದರು.

ಕಾಡುಹಂದಿ, ಕೃಷ್ಣಮೃಗ ಇತರ ಪ್ರಾಣಿಗಳಿಂದ ಬೆಳೆ ಹಾನಿಯಾಗುವುದನ್ನು ತಡೆಯಬೇಕು, ನಿವೇಶನ ರಹಿತರಿಗೆ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಪಶು ಆಸ್ಪತ್ರೆಗೆ ಪೂರ್ಣ ಪ್ರಮಾಣದ ವೈದ್ಯರ ನಿಯೋಜನೆಯಾಗಬೇಕು. ಗ್ರಾಮದ ಐತಿಹಾಸಿಕ ರಂಗನಾಥಸ್ವಾಮಿ, ಭುಜಂಗೇಶ್ವರ ದೇವಾಲಯ ಛಾವಣಿಗಳು ಸೋರುತ್ತಿದ್ದು, ಇದರ ದುರಸ್ತಿಯಾಗಬೇಕು, ಸ್ಮಶಾನ ಒತ್ತುವರಿ ತೆರವು ಸೇರಿದಂತೆ ಇತರ ವೈಯಕ್ತಿಕ ಮನವಿ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಬಳಿ ನಿವೇದಿಸಿ ಪರಿಹರಿಸಿಕೊಳ್ಳಲು ಕೇಳಿಕೊಂಡರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಜನರಿಂದ ಸಮಸ್ಯೆ ಪ್ರಸ್ತಾಪವಾಗುತ್ತಿದ್ದಂತೆಯೇ ಕೂಡಲೇ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಮ ವಹಿಸುವಂತೆ ತಿಳಿಸಿದರು.

ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಪಟ್ಟಿ ಮಾಡಿಕೊಂಡು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಲಿದ್ದಾರೆ ಎಂದು ತಿಳಿಸಿದರು.

ತಾಲೂಕು ಹಂತದ ಅಧಿಕಾರಿಗಳು ಆಯಾ ಭಾಗದ ಸಮಸ್ಯೆಗಳನ್ನು ಅಲ್ಲಿಯೇ ಸಮರ್ಪಕವಾಗಿ ಪರಿಹರಿಸಿದರೆ ಮೇಲಿನ ಹಂತದವರೆಗೆ ದೂರು ಬರುವುದಿಲ್ಲ. ಹೀಗಾಗಿ, ಸ್ಥಳೀಯ ಕುಂದುಕೊರತೆಗಳನ್ನು ಬಗೆಹರಿಸಬೇಕು. ಯಾವುದೇ ತೊಂದರೆ ಇರಲಿ ಅದಕ್ಕೆ ಸ್ಪಂದಿಸಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಕಂದಾಯ ಇಲಾಖೆೆ ವತಿಯಿಂದ ಫಲಾನುಭವಿಗಳಿಗೆ ಮಾಸಾಶನ, ವಿಧವಾ ವೇತನ, ಮನಸ್ವಿನಿ ಯೋಜನೆ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಸವಲತ್ತುಗಳ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚಂದ್ರಮ್ಮ, ತಹಸೀಲ್ದಾರ್ ಬಸವರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಪ್ರೊಬೆಷನರಿ ತಹಸೀಲ್ದಾರ್ ರೇಷ್ಮಾ ಗೌರವ್, ಭೂ ದಾಖಲೆಗಳ ಉಪ ನಿರ್ದೇಶಕರಾದ ವಿದ್ಯಾಯಿನಿ ಇನ್ನಿತರರು ಉಪಸ್ಥಿತರಿದ್ದರು.

ಡಿಸಿಗೆ ಕುಂಭ ಪೂರ್ಣ ಸ್ವಾಗತ: ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅವರನ್ನು ಮಕ್ಕಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಮಂಗಳವಾದ್ಯ, ಎತ್ತಿನಗಾಡಿ ಮೆರವಣಿಗೆ ಸಹ ಏರ್ಪಾಡು ಮಾಡಲಾಗಿತ್ತು. ಶಾಲಾ ಆವರಣದಲ್ಲಿ ಏರ್ಪಾಡಾಗಿದ್ದ ರಕ್ತದಾನ ಶಿಬಿರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪೋಷಣ್ ಮಾಸಾಚರಣೆ ಅಂಗವಾಗಿ ಏರ್ಪಡಿಸಿದ್ದ ಪೌಷ್ಟಿಕ ಆಹಾರ ಪದಾರ್ಥಗಳ ಪ್ರದರ್ಶನ, ಇತರ ಜಾಗೃತಿ ಪ್ರದರ್ಶನ ಉದ್ಘಾಟಿಸಿ ವೀಕ್ಷಿಸಿದರು.

ಗ್ರಾಮ ಸಂಚಾರ ನಡೆಸಿದ ಡಿಸಿ: ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಉಮ್ಮತ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಮುರಾರ್ಜಿ ದೇಸಾಯಿ ವಸತಿ ಶಾಲೆ, ದೇವಾಲಯಗಳಿಗೆ ಭೇಟಿ ನೀಡಿದರು.

ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಮಕ್ಕಳಿಗೆ ಭವಿಷ್ಯದಲ್ಲಿ ಏನಾಗಬೇಕೆಂದು ಬಯಸಿದ್ದೀರ ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳು ಶ್ರಮವಹಿಸಿದರೆ ಅದೃಷ್ಟ ಒಲಿಯುತ್ತದೆ. ಆತ್ಮ ವಿಶ್ವಾಸ ರೂಢಿಸಿಕೊಂಡರೆ ಅಗಾಧ ಸಾಧನೆ ಮಾಡಬಹುದು ಎಂದು ಸಲಹೆ ಮಾಡಿದರು. ಉಮ್ಮತ್ತೂರು ಕೆರೆ ವೀಕ್ಷಣೆ ಮಾಡಿದರು. ಹತ್ತಿರದಲ್ಲಿಯೇ ಇದ್ದ ಮಿಲಿಟರಿ ಕ್ಯಾಂಪ್‌ಗೆ ಡಿಸಿ ಭೇಟಿ ನೀಡಿದರು. ತಹಸೀಲ್ದಾರ್ ಬಸವರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಮತ್ತಿತರರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net