ಜನರ ಅಭಿಮಾನದಿಂದ ಸಾಧನೆಯ ಉತ್ತುಂಗಕ್ಕೆ

04 SIRAGUPPA 01
Published on

ಸಿರಗುಪ್ಪ: ಸರಳ ವ್ಯಕ್ತಿತ್ವ ಹಾಗೂ ನಾಯಕತ್ವದ ಗುಣ ಸಮಾಜದಲ್ಲಿ ಉನ್ನತ ಸ್ಥಾನ ಹೊಂದಲು ನೆರವಾಗುತ್ತದೆ. ಇಂತಹ ಗುಣಗಳನ್ನು ಸಹಕಾರ ರತ್ನ ಚೊಕ್ಕ ಬಸವನಗೌಡ ಹೊಂದಿದ್ದಾರೆಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಪಟ್ಟಣದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡರ ಜನ್ಮದಿನದ ಅಮೃತ ಮಹೋತ್ಸವ ಮತ್ತು ವಿವಾಹದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ, ಪ್ರಾಮಾಣಿಕತೆ ಬೆಳೆಸಿದಲ್ಲಿ ಮುಂದೆ ಜನನಾಯಕರಾಗಿ ನಿಷ್ಠೆಯಿಂದ ಸೇವೆ ಮಾಡುತ್ತಾರೆ. ಚೊಕ್ಕ ಬಸವನಗೌಡರ ಮೇಲೆ ತಾಲೂಕಿನ ಜನರು ಹಾಗೂ ರೈತರು ಹೊಂದಿರುವ ಅಭಿಮಾನದಿಂದ ಅವರು ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯವಾಗಿದೆ ಎಂದರು.

ಪ್ರಾಮಾಣಿಕವಾಗಿ ಜನರ ಸೇವೆಯನ್ನು ಮಾಡಿದರೆ ಜನರು ಅವರಿಗೆ ಯಾವ ರೀತಿಯಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ ಎಂಬುದಕ್ಕೆ ಚೊಕ್ಕ ಬಸವನಗೌಡರ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮ ಸಾಕ್ಷಿಯಾಗಿದೆ. ಕಾಯಕ ನಿಷ್ಠೆ, ಗುರು-ಹಿರಿಯರ ಹಾಗೂ ರೈತರ ಸೇವೆ ಚೊಕ್ಕ ಬಸವನಗೌಡರ ಸಾಧನೆಗೆ ಕಾರಣವಾಗಿದೆ ಎಂದು ತಿಳಿಸಿದರು.

ಶ್ರೀಶೈಲ ಪೀಠದ ಬಗ್ಗೆ ಅಪಾರ ದೈವಭಕ್ತಿ ಹೊಂದಿ ಸದಾ ಶಿವ ಪೂಜೆ ಮಾಡುತ್ತಾ ಗುರುಲಿಂಗ ಜಂಗಮರನ್ನು ಗೌರವಿಸುವ ಗುಣವನ್ನು ಚೊಕ್ಕ ಬಸವನಗೌಡರು ಹೊಂದಿದ್ದಾರೆ. ಜನ್ಮದಿನದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷದಾಕಯವಾಗಿದೆ. 30 ವರ್ಷಕ್ಕೂ ಅಧಿಕ ಕಾಲ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರದಲ್ಲಿ ರಾಜ್ಯ ಮಟ್ಟದವರೆಗೆ ಬೆಳೆದಿರುವುದೇ ಚೊಕ್ಕ ಬಸವನಗೌಡರ ಕಾಯಕ ನಿಷ್ಠೆಯ ಶ್ರಮದ ಸೇವೆಯ ಫಲವಾಗಿದೆ ಎಂದು ಶ್ರೀಶೈಲ ಜಗದ್ಗುರುಗಳು ತಿಳಿಸಿದರು.

ಪ್ರಮುಖರಾದ ಜಡೇಯ್ಯ ಸ್ವಾಮಿ, ಚೊಕ್ಕ ಹನುಮನ ಗೌಡ, ದಿವಾಕರ ನಾರಾಯಣ, ಗಿರೀಶ್ ಗೌಡ, ಮಹಾಂತೇಶ ಸ್ವಾಮಿ, ಶಾಂತನಗೌಡ, ಪಂಪಾಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net