ಜನಮಾನಸದಲ್ಲಿ ಅರಸು ಅಜರಾಮರ, ಸಚಿವ ಎಂಟಿಬಿ ಸ್ಮರಣೆ, ಹೊಸಕೋಟೆ ತಾಲೂಕು ಕಚೇರಿಯಲ್ಲಿ ದೇವರಾಜು ಅರಸು ಜನ್ಮದಿನಾಚರಣೆ

6ad5caad-c219-4ebb-99bc-7f5a8070554c
Published on

ಬೆಂಗಳೂರು ಗ್ರಾಮಾಂತರ: ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳ ಮೂಲಕ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಜನಮಾನಸದಲ್ಲಿ ಅಜರಾಮರರಾಗಿದ್ದಾರೆ ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಸಚಿವ ಎಂಟಿಬಿ ನಾಗರಾಜ್ ಸ್ಮರಿಸಿದರು.

ಹೊಸಕೋಟೆ ತಾಲೂಕು ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ.ದೇವರಾಜು ಅರಸು ಅವರ 106ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳ ಮೂಲಕ ದೀನದಲಿತರ ಉದ್ಧಾರಕ್ಕಾಗಿ ಪ್ರಾಮಾಣಿಕ ಪ್ರಯತ್ನದ ಮೂಲಕ ಯಶಸ್ಸು ಕಂಡು ಅರಸು ಅವರ ಕಾರ್ಯಶೈಲಿ ಪ್ರತಿಯೊಬ್ಬ ಜನನಾಯಕರಿಗೂ ಮಾದರಿಯಾಗಿದೆ ಎಂದು ಬಣ್ಣಿಸಿದರು.

ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅರಸು ಅವರು ಜಾರಿಗೊಳಿಸಿದ ಅನೇಕ ಯೋಜನೆಗಳು ಶ್ಲಾಘನೀಯವಾಗಿವೆ. ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದಷ್ಟೇ ಅಲ್ಲದೆ ಅವರ ಕಾಲಾವಧಿಯಲ್ಲೇ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ನಾಯಕರಾಗಿದ್ದಾರೆ ಎಂದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಹಿಂದುಳಿದ ಜಾತಿಗಳ ಪಾಲಿಗೆ ಸುವರ್ಣ ಯುಗವೊಂದು ಆರಂಭವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಕರಾರುವಕ್ಕಾಗಿ ಅನುಷ್ಠಾನಗೊಳಿಸಿದ ಕೀರ್ತಿ ಅರಸು ಅವರಿಗೆ ಸಲ್ಲಿಸುತ್ತದೆ ಎಂದರು.

ಮಲಹೊರುವ ನಿಷೇಧ ಕಾನೂನು, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆ, ಜೀತಪದ್ಧತಿ ನಿಷೇಧ, ಋಣಪರಿಹಾರ ಕಾಯ್ದೆ, ಕನಿಷ್ಠ ಕೂಲಿ ನಿಗದಿ, ಭಾಗ್ಯಜ್ಯೋತಿ ಯೋಜನೆ ಸೇರಿ ಅಂದಿನ 20 ಅಂಶಗಳ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲಿಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದವರಲ್ಲಿ ಅರಸು ಅವರು ಮುಂಚೂಣಿಯಲ್ಲಿದ್ದರು ಎಂದರು.

ಭೂಸುಧಾರಣಾ ಕಾಯ್ದೆಯೆಂಬ ಕ್ರಾಂತಿಕಾರಕ ಕಾಯ್ದೆಯನ್ನು ರೂಪಿಸಿದರು. ಈ ವೇಳೆ ಬಲಾಢ್ಯ ಭೂಮಾಲೀಕರ ಪ್ರಬಲ ವಿರೋಧ ವ್ಯಕ್ತವಾದರೂ ಅದ್ಯಾವುದಕ್ಕೂ ಹೆದರದೆ ನಿರ್ಗತಿಕ ಸಮುದಾಯಗಳಗಳಲ್ಲಿ ಬಲ ತುಂಬುವ ಕೆಲಸ ಮಾಡಿದರು ಎಂದು ಸ್ಮರಿಸಿದರು.

ಕೋವಿಡ್ ಹಿನ್ನೆಲೆ ಸರಳ ಆಚರಣೆ:

ತಹಸೀಲ್ದಾರ್ ಗೀತಾ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ದೇವರಾಜು ಅರಸು ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಗುತ್ತಿದೆ, ಸಚಿವರು ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಜ್ಯೋತಿಬೆಳಗುವ ಮೂಲಕ ಅರಸು ಜನ್ಮಾದಿನಾಚರಣೆಗೆ ಚಾಲನೆ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net