ಜನಮನ ಸೂರೆಗೊಂಡ ಸಂಗೀತೋತ್ಸವ

SRP_23-02jpj.
Published on

ಶ್ರೀರಂಗಪಟ್ಟಣ: ಪಟ್ಟಣದ ಶ್ರೀಬಾಲಸುಬ್ರಮಣ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ದೇವರ ದಾಸಿಮಯ್ಯ ಹಾಗೂ ಕನಕ ಪುರಂದರ ಆರಾಧನಾ ಮಹೋತ್ಸವ ಪ್ರಯುಕ್ತ ಸಂಗೀತ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ಬೆಂಗಳೂರಿನ ಕೆ.ಆರ್.ಪುರಂನ ಶ್ರೀಕಲಾ ಶೃಂಗ ತಂಡದ ಇಪ್ಪತ್ತೈದು ಕುಟುಂಬದ ಸದಸ್ಯರು ಮತ್ತು ಪುಟಾಣಿ ಮಕ್ಕಳು ಭಜನಾ ಸಂಗೀತ ಹಾಗೂ ಭರತನಾಟ್ಯ ಪ್ರಸ್ತುತಪಡಿಸುವ ಮೂಲಕ ಸಂಗೀತ ಸೇವೆ ನೀಡಿ ಕಲಾ ರಸಿಕರಿಗೆ ಮನೋರಂಜನೆ ಉಣ ಬಡಿಸಿದರು.

ಮಹಿಳೆಯರ ಹುಲಿಯಾರು ಭಜನಾ ತಂಡವು ಬೆಳಗ್ಗೆ 10ರಿಂದ ಶ್ರೀರಂಗನಾಥಸ್ವಾಮಿಯ ನಾಮಸ್ಮರಣೆಯೊಂದಿಗೆ ದೇವರ ನಾಮಸ್ತ್ರೋತ್ರಗಳನ್ನು ಪಠಿಸಿದರು. 8 ವರ್ಷದ 12 ಕಿಶೋರರು ಭರತ ನಾಟ್ಯದ ಅಮೋಘ ನೃತ್ಯ ಪ್ರದರ್ಶನ ನೀಡಿದ್ದು, 8 ಮಂದಿ ಪುಟಾಣಿ ತಮ್ಮ ಅದ್ಭುತ ಕಂಠ ಸಿರಿಯಿಂದ ಗಣೇಶ ಸ್ಮತಿ ಹಾಡಿ ನೆರೆದಿದ್ದವರನ್ನು ಸಂಗೀತದ ಹೊಳೆಯಲ್ಲಿ ತೇಲಿಸಿದರು.

ಕಾರ್ಯಕ್ರಮದಲ್ಲಿ ವಿದ್ವಾನ್ ಸುರೇಶ ಶಾಸ್ತ್ರೀಗಳು ಸಂಗೀತ ವಾದ್ಯಗಳೊಂದಿಗೆ ದಾಸರ ಪದಗಳು ಮತ್ತು ಸಂಗೀತ ಮೂಲಕ ಸಂಗೀತ ರಸದೌತಣ ನೀಡಿದ್ದು, ಅಂತಿಮವಾಗಿ ಎಲ್ಲ ಅತಿಥಿಗಳ ಸಮ್ಮುಖದಲ್ಲಿ ದೈವಿಕ ಪುರುಷರಿಗೆ ಮಹಾಮಂಗಳಾರತಿ ಹಾಗೂ ಸ್ಮರಣೆಯೊಂದಿಗೆ ಸಂಜೆ ಸಭೆ ಮುಕ್ತಾಯಗೊಂಡಿತು.

ಕಾರ್ಯಕ್ರಮದಲ್ಲಿ ಜ್ಯೋತಿಷಿ ಭಾನುಪ್ರಕಾಶ್, ಬೇಬಿ ಮಠದ ಶಿವಬಸವ ಸ್ವಾಮೀಜಿ, ಪುರಸಭಾ ಸದಸ್ಯ ಎಸ್.ಪ್ರಕಾಶ್, ಬೆಂಗಳೂರಿನ ಗಂಗಾಧರ್ ತಿಮ್ಮಣ್ಣ, ತಾಲೂಕು ಬಜರಂಗದಳದ ಸಂಚಾಲಕ ಶಂಕರ್, ದಸಂಸ ಮುಖಂಡ ಸುಬ್ರಮಣ್ಯ, ಬಿಜೆಪಿ ಮುಖಂಡ ಉಮೇಶ್ ಕುಮಾರ್, ಬೆಳಗೊಳ ಸುನೀಲ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net