

ಹಾಸನ: ಅಪಘಾತದಲ್ಲಿ ಬಲ ಮುಂಗೈ ಮುರಿದುಕೊಂಡು ಬೆಂಗಳೂರಿನಲ್ಲಿ ಯಶಸ್ವಿಯಾಗದ ಶಸ್ತ್ರಚಿಕಿತ್ಸೆಯನ್ನು ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ಡಾ. ವಿ.ಕೆ. ಅಬ್ದುಲ್ ಬಷೀರ್ ಹೇಳಿದರು.
ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಆಟೋ ಮಗುಚಿ ಬಿದ್ದು ಬಾಲಕಿ ಕೈ ಮೇಲೆ ಬಿದ್ದಿದ್ದರಿಂದ ಆಕೆಯ ಬಲ ಮುಂಗೈ ಸಂಪೂರ್ಣ ಜಜ್ಜಿ ಹೋಗಿತ್ತು. ಸುಮಾರು ಐದು ದಿನ ಬೆಂಗಳೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಕೈಯನ್ನು ಕತ್ತರಿಸಿ ತೆಗೆಯಬೇಕು ಎಂದು ವೈದ್ಯರು ತಿಳಿಸಿದ್ದರು. ಆಗ ಸಂಬಂಧಿಕರ ಸಲಹೆ ಮೇರೆಗೆ ಬಾಲಕಿಯನ್ನು ಪಾಲಕರು ನಮ್ಮ ಜನಪ್ರಿಯ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು ಎಂದು ತಿಳಿಸಿದರು.
ಮುಂಗೈನ ಮಧ್ಯದಿಂದ ಕೆಳಗಡೆ ಭಾಗ ಸಂಪೂರ್ಣ ಜಜ್ಜಿ ಮೂಳೆಗಳು, ನರಗಳು, ಮಾಂಸ ಖಂಡಗಳು ಬೇರ್ಪಟ್ಟು ಬಿದ್ದು ಹೋಗಿದ್ದವುಲ. ನಂತರ ಬೇರೆ ಬೇರೆ ನರಗಳಿಗೆ ಹಾಗೂ ಮಾಂಸಖಂಡಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಕೃತಕ ಮೂಳೆಯನ್ನು ಜೋಡಣೆ ಮಾಡಿ ಯಶಸ್ವಿಯಾಗಿ ಬಾಲಕಿಯ ಕೈ ಸರಿ ಮಾಡಲಾಯಿತು. ಈ ಶಸ್ತ್ರ ಚಿಕಿತ್ಸೆ ತಂಡದಲ್ಲಿ ನಾನು, ಡಾ.ರಜತ್, ಡಾ.ತ್ರಿವಿಕ್ರಂ, ಡಾ.ನಮಾನ್, ಡಾ.ನಿಖಿಲ್ ಶೆಟ್ಟಿ, ಡಾ. ಸುಹಾಸ್ ಇದ್ದರು ಎಂದು ಮಾಹಿತಿ ನೀಡಿದರು.
ಡಾ. ಪ್ರವೀಣ್ ಮಾತನಾಡಿ, ಸಕಲೇಶಪುರದ ಟಯರ್ ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ವ್ಯಕ್ತಿಯ ಹೊಟ್ಟೆ ಸಂಪೂರ್ಣ ಒಡೆದು ಕರುಳು ಹೊರ ಭಾಗಕ್ಕೆ ಬಂದಿತ್ತು. ಅವರು ನಮ್ಮ ಆಸ್ಪತ್ರೆಗೆ ಬಂದಾಗ ಅವರ ಹೃದಯ ಮತ್ತು ಶ್ವಾಸಕೋಶ ಪುನರ್ ಚೇತರಿಸುವಂತೆ ಮಾಡಿ ಸುಮಾರು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಆ ವ್ಯಕ್ತಿಯನ್ನು ಬದುಕಿಸಲಾಯಿತು ಎಂದು ಹೇಳಿದರು.
ಈ ವೇಳೆ ಅರವಳಿಕೆ ತಜ್ಞ ಡಾ.ನಿಖಿಲ್ ಶೆಟ್ಟಿ ಇದ್ದರು.