ಜನಪ್ರತಿನಿಧಿಗಳು ಆಗಮಿಸದ ಕಾರಣ ಕಾರ್ಯಕ್ರಮ ಮುಂದೂಡಿಕೆ

ಜನಪ್ರತಿನಿಧಿಗಳು ಆಗಮಿಸದ ಕಾರಣ ಕಾರ್ಯಕ್ರಮ ಮುಂದೂಡಿಕೆ
Published on

ಹಾಸನ: ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ಇಲ್ಲದೆ ಕಾರಣ ಇದೇ ಮಾದಲ ಬಾರಿಗೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮುಂದೂಡಿದೆ.

ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕಲಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕೇವಲ ಬೆರಳೆಣಿಕೆ ಜನರು ಭಾಗವಹಿಸಿದ್ದರಿಂದ ದಲಿತ ಮುಂಖಡರು ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ 12 ಗಂಟೆಯಾದರೂ ಕೂಡ ಕಾರ್ಯಕ್ರಮದಲ್ಲಿ 15 ಜನಕ್ಕಿಂತ ಹೆಚ್ಚಿನ ಜನರು ಕಾಣಲಿಲ್ಲ. ಗಣ್ಯರು ಕೂಡ ಕಾರ್ಯಕ್ರಮಕ್ಕೆ ಬಾರಲಿಲ್ಲ. ಕೇವಲ ಇಬ್ಬರು ಕಲಾವಿದರು ಖಾಲಿ ಕುರ್ಚಿಗಳಿಗೆ ಹಾಡು ಹೇಳುತ್ತಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾಮಟ್ಟದ ಯಾವ ಅಧಿಕಾರಿಗಳು ಕೂಡ ಆಗಮಿಸಿರಲಿಲ್ಲ ಆದರೆ, ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ರಮೇಶ್, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ, ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಶಾಂತ ಅತ್ನಿ ಅವರನ್ನು ಬಿಟ್ಟರೆ ಉಳಿದವರು ಯಾರೂ ಕೂಡ ಆಗಮಿಸಲಿಲ್ಲ. ಅಲ್ಲದೆ ಪ್ರತಿ ಕಾರ್ಯಕ್ರಮಗಳಿಗೂ ಕೂಡ ಜಿಲ್ಲಾಧಿಕಾರಿ ಕಚೇರಿಯಿಂದ ಮೆರವಣಿಗೆ ನಡೆಸಲಾಗುವುದು. ಆದರೆ ಈ ಕಾರ್ಯಕ್ರಮದಲ್ಲಿ ಮೆರವಣಿಗೆಯನ್ನು ಮಾಡಲಿಲ್ಲ.

ಜನಪ್ರತಿನಿಧಿಗಳು ಗೈರು

ವೀರವನಿತೆ ಒನಕೆ ಓಬವ್ವ ಅವರ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಶಾಸಕರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಆದರೆ ಯಾರೊಬ್ಬರೂ ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ.

ನೂರು ಜನರಿಗೆ ಆಹಾರ:

ಕಾರ್ಯಕ್ರಮಕ್ಕೆ ಬರುವಂತಹ ಜನರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು 100 ಜನರಿಗೆ ಆಹಾರ ತಯಾರು ಮಾಡಿದ್ದರು. ಆದರೆ ಹೆಚ್ಚಿನ ಜನರು ಆಗಮಿಸದೆ ಇರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಪೀಕಲಾಟಕ್ಕೆ ಸಿಲುಕಿದರು.

ಪತ್ರಿಕೆಯೊಂದಿಗೆ ಮಾತನಾಡಿದ ದಲಿತ ಮುಖಂಡ ಆರ್‌ಪಿಐ ಸತೀಶ್, ಇಂತಹ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಮಾಡುವುದಿಲ್ಲ. ಬೇಕಾಬಿಟ್ಟಿಯಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ಸರ್ಕಾರ ಅನುದಾನವನ್ನು ಕೂಡ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಕಾರ್ಯಕ್ರಮ ಆಯೋಜನೆಗೂ ಮೊದಲು ಪೂರ್ವಭಾವಿ ಸಭೆಗಳನ್ನು ಕರೆದು ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಚರ್ಚೆ ಮಾಡಬೇಕು. ಆದರೆ ಸರಿಯಾದ ರೀತಿ ಸಿದ್ಧತೆ ಮಾಡಿಕೊಳ್ಳದೆ ಇರುವುದರಿಂದ ಈ ರೀತಿ ಕಾರ್ಯಕ್ರಮ ಮುಂದೂಡುವಂತಹ ಪರಿಸ್ಥಿತಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳೊದಾಗಿ ಎಚ್ಚರಿಸಿದರು.

ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ದಿನಾಂಕ ನಿರ್ಧಾರ: ತಾರಾನಾಥ

ಓಬವ್ವ ಜಯಂತಿ ಅವರ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಗಮಿಸದೆ ಇರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ತಾರಾನಾಥ ತಿಳಿಸಿದರು

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ಒನಕೆ ಓಬವ್ವ ಅವರ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆಯನ್ನು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರು 150 ಜನರನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿದ್ದರು. ಆದರೆ ಜನರು ಆಗಮಿಸಲಿಲ್ಲ. ಈ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net