

ಬೇಲೂರು: ಜನಪ್ರತಿನಿಧಿಗಳಿಗೆ ತಮ್ಮದೇ ಆದ ಶ್ರದ್ಧೆ, ಬದ್ಧತೆ ಇದ್ದರೆ ಉತ್ತಮ ಕೆಲಸ ಮಾಡಬಹುದು ಎಂಬುದನ್ನು ದಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್, ಸದಸ್ಯರು ಮತ್ತು ಸಿಬ್ಬಂದಿ ಮಾಡಿ ತೋರಿಸಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜು ಹೇಳಿದರು.
ಬೇಲೂರು ತಾಲೂಕಿನ ದಬ್ಬೆ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿ, ಈ ಪಂಚಾಯಿತಿಯೂ 6 ಸದಸ್ಯರನ್ನು ಮಾತ್ರ ಹೊಂದಿದೆ. ಆದರೂ ಇಲ್ಲಿನ ಸದಸ್ಯರು ಮತ್ತು ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷದ ಹಿಂದೆಯೇ ಈ ಕಟ್ಟಡ ಉದ್ಘಾಟನೆ ಆಗಬೇಕಿತ್ತು. ಆದರೆ ನೆನೆಗುದಿಗೆ ಬಿದ್ದಿತ್ತು. ನಂತರ ಶಾಸಕರು, ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರ ಸಹಕಾರದಿಂದ ಕಟ್ಟಡದ ಭೂಮಿಪೂಜೆ ನೆರವೇರಿಸಿದ ಒಂದು ವರ್ಷದೊಳಗೆ ಕಟ್ಟಡದ ಉದ್ಘಾಟಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ದಬ್ಬೆ ಗ್ರಾಮ ಪಂಚಾಯಿತಿ ಕಟ್ಟಡವನ್ನು ವಿಶೇಷವಾಗಿ ಕಟ್ಟಿದ್ದಾರೆ. ನಾನು ಸಹ ಅಲ್ಪ ಅನುದಾನ ಕೊಟ್ಟಿದ್ದೆ. ಇದಕ್ಕೆ ಬೇಕಿರುವ ಅನುದಾನವನ್ನು ವಿಧಾನಪರಿಷತ್ ಸದಸ್ಯರು ಮತ್ತು ಲೋಕಸಭಾ ಸದಸ್ಯರ ಅನುದಾನದಲ್ಲಿ ಕೊಡಿಸಲು ಮುಂದಾಗಲಿದ್ದೇನೆ ಎಂದರು.
ಈ ಗ್ರಾಮದಿಂದ ಹತ್ತಾರು ಗ್ರಾಮಗಳ ಮೂಲಕ ಗೆಂಡೇಹಳ್ಳಿ ತಲುಪುವ ಸೇತುವೆ ನಿರ್ಮಾಣಕ್ಕೆ ಈ ಹಿಂದೆ ಗ್ರಾಮಸ್ಥರು ಮನವಿ ಮಾಡಿದ್ದರು. ಅದರಂತೆ ಸೇತುವೆ ನಿರ್ಮಿಸಲಾಗಿದೆ. ಸಣ್ಣಪುಟ್ಟ ಕೆಲಸ ಇದೆ ಅದು ಮುಗಿಯಲಿದೆ. ಈ ಭಾಗದ ಗ್ರಾಮಗಳಿಗೆ ಸಾಧ್ಯವಾದಷ್ಟು ಕೆಲಸ ಮಾಡಿಸಿದ್ದೇನೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಟೇಲ್ ನಾಗೇಶ್, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಸಂತೋಷ್, ಧರ್ಮಾವತಿ, ವಿಶ್ವನಾಥ್, ವಿಶಾಲ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕರ್ಕಿಹಳ್ಳಿ ರಮೇಶ್, ಜಿಪಂ ಎಇಇ ರಂಜಿತಾ, ತಾಪಂ ಇಒ ಸುನೀತಾ, ಮಾಜಿ ಸದಸ್ಯೆ ಪದ್ಮಾಕ್ಷಿ ಸತ್ಯನಾರಾಯಣ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಎಚ್.ಮಹೇಶ್, ಸಹಾಯಕ ನಿರ್ದೇಶಕ ದಯಾನಂದ್, ಗುರುಪ್ರಸಾದ್ ಇತರರು ಇದ್ದರು.