

ಹನೂರು: ಉತ್ತಮ ಆಡಳಿತ ಹಾಗೂ ಜನಪರ ಯೋಜನೆಗಳೇ ಬಿಜೆಪಿ ಗೆಲುವಿಗೆ ರಕ್ಷೆಯಾಗಿವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್. ದತ್ತೇಶ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲೇಮಾಳ ಗ್ರಾಮದಲ್ಲಿ ಮಂಗಳವಾರ ವಿಜಯ ಸಂಕಲ್ಪ ಅಭಿಯಾನದಡಿ ಸರ್ಕಾರದ ಸಾಧನೆಯ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಸರ್ಕಾರ ಅಭಿವೃದ್ಧಿಯ ಸಂಕಲ್ಪವನ್ನು ತೊಟ್ಟಿದೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಒತ್ತನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತವನ್ನು ನೀಡುವುದರ ಮೂಲಕ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದು ಜನಮನ್ನಣೆ ಗಳಿಸಿದೆ. ಈ ದಿಸೆಯಲ್ಲಿ ಸರ್ಕಾರದ ಸಾಧನೆ ಹಾಗೂ ಬಿಜೆಪಿ ತತ್ವ, ಸಿದ್ಧಾಂತವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ವಿಜಯ ಸಂಕಲ್ಪ ಅಭಿಯಾನವೂ ಒಂದು. ಈ ದಿಸೆಯಲ್ಲಿ ನವ ಭಾರತಕ್ಕಾಗಿ ನವ ಕರ್ನಾಟಕ ಎಂಬ ಧ್ಯೇಯದೊಂದಿಗೆ ಅಮೃತ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸುತ್ತಿದೆ. ಹಾಗಾಗಿ ಬಿಜೆಪಿ ಸರ್ಕಾರದ ಬಗ್ಗೆ ಜನರಲ್ಲಿ ಉತ್ತಮ ಒಲವಿದೆ. ಆದ್ದರಿಂದ ಈ ಬಾರಿಯು ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಜ್ಜ್ಜಾಗಬೇಕಿದೆ. ಆದ್ದರಿಂದ ಬೂತ್ ಮಟ್ಟದಲ್ಲೂ ಪಕ್ಷ ಸಂಘಟಿಸುವುದರ ಮೂಲಕ ಜನರ ವಿಶ್ವಾಸ ಗಳಿಸಬೇಕು ಎಂದು ತಿಳಿಸಿದರು.
ಬಳಿಕ ಚಿಗತಾಪುರ, ಗುಳ್ಯ, ಕುರಟ್ಟಿಹೊಸೂರು, ದಂಟಳ್ಳಿ, ಭದ್ರಯ್ಯನಹಳ್ಳಿ, ಚೆನ್ನೂರು, ಕೆಂಪಯ್ಯನಹಟ್ಟಿ ಹಾಗೂ ಶೆಟ್ಟಳ್ಳಿ ಗ್ರಾಮದಲ್ಲಿ ಸಂಚರಿಸಿ ಸ್ಟಿಕ್ಕರ್ ಅಂಟಿಸಿ ಜನರಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಲಾಯಿತು.
ಮ.ಬೆಟ್ಟ ಬಿಜೆಪಿ ಮಂಡಲ ಅಧ್ಯಕ್ಷ ವೀರಭದ್ರ, ಪ್ರಧಾನ ಕಾರ್ಯದರ್ಶಿ ಮಂಜು, ಮುಖಂಡರಾದ ರಂಗಸ್ವಾಮಿ, ಶಿವಣ್ಣ, ದಾಸಪ್ಪ, ಮುನಿಸಿದ್ದ, ರವಿ, ನಟರಾಜು, ಲಕ್ಷ್ಮಣ್ ಇನ್ನಿತರರಿದ್ದರು.