

ಯಳಂದೂರು: ಮಾಜಿ ಶಾಸಕ ಎಸ್.ಜಯಣ್ಣ ಅವರು ಜಿಲ್ಲೆ ಕಂಡ ಅಪರೂಪದ ಮುತ್ಸದ್ದಿ ರಾಜಕಾರಣಿ. ನುಡಿದಂತೆ ನಡೆದ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ ಸ್ಮರಿಸಿದರು.
ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿರುವ ಜೈಭೀಮ್ ಭವನದಲ್ಲಿ ಗುರುವಾರ ಮಾಜಿ ಶಾಸಕ ಎಸ್.ಜಯಣ್ಣ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಯಣ್ಣ ಸದಾ ಜನಪರ ಕಾಳಜಿ ಹೊಂದಿದ್ದರು. ಎರಡು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಶಾಶ್ವತ ಕೆಲಸಗಳನ್ನು ಮಾಡುವ ಮೂಲಕ ಜನಾನುರಾಗಿ ರಾಜಕಾರಣಿಯಾಗಿದ್ದರು ಎಂದರು.
ಗ್ರಾಪಂ ಸದಸ್ಯ ಮುಜಾಹಿದ್ ಉಲ್ಲಾ ಮಾತನಾಡಿ, ಎಸ್.ಜಯಣ್ಣ ಮೃದು ಭಾಷಿಯಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ.ಮಹದೇವಪ್ಪರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಶಾಸಕರಾಗಿದ್ದರೂ ಸ್ವಂತಕ್ಕಾಗಿ ಮನೆಯನ್ನೂ ಮಾಡಿಕೊಂಡಿರಲಿಲ್ಲ ಎಂಬುದೇ ಅವರ ನಿಸ್ವಾರ್ಥ ಸೇವೆಗೆ ಸಾಕ್ಷಿ. ಜನಾನುರಾಗಿಯಾಗಿದ್ದ ಅವರನ್ನು ಕಳೆದುಕೊಂಡ ಕ್ಷೇತ್ರ ಬಡವಾಗಿದೆ ಎಂದರು.
ನಿವೃತ್ತ ಶಿಕ್ಷಕ ಲಿಂಗರಾಜು ಮಾತನಾಡಿ, ಜನಾನುರಾಗಿಯಾಗಿದ್ದ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅಧಿಕಾರಕ್ಕಾಗಿ ಆಸೆ ಪಟ್ಟಿದ್ದರೆ ಉನ್ನತ ಸ್ಥಾನದಲ್ಲಿರುತ್ತಿದ್ದರು. ಅವರ ಅಕಾಲಿಕ ಸಾವು ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಿದೆ ಎಂದರು. ಗ್ರಾಮದ ಮಾದೇವಿ ಅವರು ಜಯಣ್ಣ ಅವರ ಕುರಿತು ರಚಿಸಿದ್ದ ಕವನವನ್ನು ವಾಚಿಸಿದರು. ಗ್ರಾಪಂ ಅಧ್ಯಕ್ಷ ಆರ್.ಮಲ್ಲೇಶ್, ಮಾಜಿ ಅಧ್ಯಕ್ಷೆ ಇಂದ್ರಮ್ಮ ಕನಕರಾಜು, ಕಿರಣ್, ಮಾಧವಿ, ಮಾಂಬಳ್ಳಿ ಅರುಣ್‌ಕುಮಾರ್, ಕೆ.ಗೋಪಾಲಯ್ಯ, ದೇವರಾಜು, ನಾಗೇಂದ್ರಪ್ರಸಾದ್, ಸಿ.ಬಸವರಾಜು, ಪ್ರವೀಣ್, ಬಿ.ರಾಮು, ಎಸ್.ಮಾದೇಶ್, ಗುರುಮಲ್ಲಯ್ಯ, ಬಸವರಾಜು ಇದ್ದರು.