ಜನಪರ ಆಡಳಿತ ನೀಡುವಲ್ಲಿ ಕುಮಾರ್ ಬಂಗಾರಪ್ಪ ವಿಫಲ: ಬಿಜೆಪಿ ಮುಖಂಡ ರಾಜು ತಲ್ಲೂರು ಆರೋಪ

SOR WEEB
Published on

ಸೊರಬ: ತಾಲೂಕಿನಲ್ಲಿ ಬಿಜೆಪಿ ಪರವಾದ ಜನಾದೇಶ ಇರುವುದು ಸತ್ಯ. ಆದರೆ ಶಾಸಕ ಕುಮಾರ್ ಬಂಗಾರಪ್ಪ ಅವರಿಗೆ ಸಂಪೂರ್ಣ ಜನಾದೇಶವಿಲ್ಲ ಎಂದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಆಹ್ವಾನಿತ ರಾಜು ಎಂ. ತಲ್ಲೂರು ದೂರಿದರು.

ತಾಲೂಕು ಅಭಿವೃದ್ಧಿ ಕಂಡಿದೆ ಎಂದರೆ ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರ ಸಹಕಾರದಿಂದ ಸಾಧ್ಯವಾಗಿದೆ. ಬಗರ್‌ಹುಕುಂ ರೈತರ ಹಿತ ಕಾಯಲು ಶಾಸಕರು ವಿಫಲರಾಗಿದ್ದಾರೆ. ಬಗರ್‌ಹುಕುಂ ರೈತರ ವಿರುದ್ಧ ಶಾಸನ ಸಭೆಯಲ್ಲಿ ಧ್ವನಿ ಎತ್ತಿ ಹಕ್ಕುಪತ್ರ ವಜಾಗೊಳ್ಳುವಂತೆ ಮಾಡಿ ರೈತರು ನ್ಯಾಯಾಲಯ ಅಲೆಯುವಂತೆ ಮಾಡಿರುವುದೇ ಶಾಸಕರ ಸಾಧನೆಯಾಗಿದೆ. ಜನಾಭಿಪ್ರಾಯ ಇಲ್ಲದ ಇವರು ಮತ್ತೊಮ್ಮೆ ಶಾಸಕರಾಗುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಮೇಲಾಟಗಳನ್ನು ನೆಡೆಸಿ ವಿನಾಕಾರಣ ವಿವಾದವನ್ನು ಸೃಷ್ಟಿಸಿ ಪರಸ್ಪರ ಕೇಸು ದಾಖಲಿಸಿಕೊಳ್ಳುವ ಹಂತಕ್ಕೆ ಕೊಂಡೊಯ್ದಿರುವುದು ಖಂಡನೀಯ. ಇತಿಹಾಸ ಪ್ರಸಿದ್ಧ ಚಂದ್ರಗುತ್ತಿ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸದೆ ಇರುವುದು, ತಾಲೂಕಿನ ಬಹುತೇಕ ರಸ್ತೆಗಳ ದುರಸ್ತಿ ಮಾಡದಿರುವುದು ಹಾಗೂ ಸೊರಬ ಟೌನ್ ಮುಖ್ಯ ರಸ್ತೆಯ ಅಗಲೀಕರಣ ವಿಳಂಬವಾಗಿರುವುದು, ಆನವಟ್ಟಿಯ ಜಯಪ್ಪ ರಂಗಮಂದಿರವನ್ನು ಪೂರ್ವಾಪರ ಯೋಚಿಸದೆ ತೆರವುಗೊಳಿಸಿರುವುದು, ಈಗಾಗಲೇ ಹದಿಮೂರು ಜನ ತಹಸೀಲ್ದಾರರು ಹಾಗೂ ಮೂರು ಜನ ಪುರಸಭೆಯ ಮುಖ್ಯಾಧಿಕಾರಿಗಳು ಬದಲಾವಣೆಯಾಗಿರುವುದು ಸೇರಿದಂತೆ ಅನೇಕ ಜನ ವಿರೋಧಿ ಕಾರ್ಯಗಳ ಮೂಲಕ ಶಾಸಕರು ಸಂಪೂರ್ಣ ವಿಫಲಾಗಿದ್ದಾರೆ ಎಂದು ದೂರಿದರು.

ಜನಪರವಾಗಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡುತ್ತ, ಜನರ ವಿಶ್ವಾಸವನ್ನು ಗಳಿಸಿದ್ದ ನಾನು, ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿದಾಗ ಜನರು ಬೆಂಬಲಿಸಿದ್ದರು. ತದನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದೆ ಸಣ್ಣ ಸಮುದಾಯದಿಂದ ಬಂದ ನನ್ನನ್ನು ಕಡೆಗಣಿಸುತ್ತ ಬಂದಿದ್ದರು. ದೇಶ ಮತ್ತು ಧರ್ಮವನ್ನು ರಕ್ಷಣೆ ಮಾಡಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ ಎಂದು ಹಾಗೂ ಜಿಲ್ಲಾಧ್ಯಕ್ಷರ ಕಾರ್ಯವೈಖರಿಯನ್ನು ವಿರೋಧಿಸಿ ಬಿಜೆಪಿ ಸೇರ್ಪಡೆ ಆಗಿರುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net