

ಐನಾಪುರ: ಜನಪದವೇ ನಮ್ಮ ಉಸಿರು, ನಮ್ಮ ಸಂಸ್ಕೃತಿ, ಸಂಪ್ರದಾಯವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಪ್ರಾಚಾರ್ಯ ಎನ್.ಕೆ.ಮಾಂಗ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಈಚೆಗೆ ಹಮ್ಮಿಕೊಂಡಿದ್ದ ೨೦೨೪-೨೫ ನೇ ಸಾಲಿನ ಶೈಕ್ಷಣಿಕ ವರ್ಷದ ಜನಪದ ಉತ್ಸವದಲ್ಲಿ ಮಾತನಾಡಿದರು. ಪದವಿ ಹಂತದಲ್ಲಿ ಜಾನಪದ ಉತ್ಸವ ಮಾಡುತ್ತಿರುವುದು ಹರ್ಷ ತಂದಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಾಧಿಕಾರಿ ಕಪಿಲ ಕಾಂಬಳೆ ಪ್ರಾಸ್ತಾವಿಕ ಮಾತನಾಡಿ, ಮಾನವನ ಅರಿವಿನ ಉಗಮದೊಂದಿಗೆ ಜನಪದ ಬೆಳೆದು ಬಂದಿದೆ ಎಂದರು.
ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದರು. ಜೋಳಧಾನ್ಯಕ್ಕೆ ಪೂಜೆ ಸಲ್ಲಿಸಿ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಉದ್ಘಾಟಿಸಿದರು. ಸಾಂಪ್ರದಾಯಿಕ ಶೈಲಿಯಲ್ಲಿ ಕಾಲೇಜು ಸಿಂಗರಿಸಿ ವಿದ್ಯಾರ್ಥಿಗಳು ಮೆರುಗು ನೀಡಿದ್ದರು. ಕೃಷಿ ಸಾಮಗ್ರಿ ಪ್ರದರ್ಶನಕ್ಕೆ ಇಡಲಾಗಿತ್ತು. ಡೊಳ್ಳಿನ ಪದ, ಕಣಿ ವಾದನ, ಜನಪದ ಹಾಡುಗಳ ಕಾರ್ಯಕ್ರಮ ಜರುಗಿತು.
ಉಪನ್ಯಾಸಕಿ ಶಾಂತಾ ಬಂಗಾರಿ, ಭಾಗ್ಯಶ್ರೀ ಎಂ.ಎಸ್., ಸಾಗರಿಕಾ ಎಂ.ಎನ್., ಉಪನ್ಯಾಸಕ ಸೋಹಿಲ್ ಸತ್ತಿಕರ, ಮಹಾವೀರ ಖವಟಕೊಪ್ಪ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಇತರರು ಇದ್ದರು.