ಜನಪದರ ಜೀವನ ಸತ್ವ ತಿಳಿಯುವ ಅಗತ್ಯ

4BK2
ಬಸವಕಲ್ಯಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವವನ್ನು ಪ್ರೊ.ಶಂಭುಲಿಂಗ ಕಾಮಣ್ಣ ಉದ್ಘಾಟಿಸಿದರು. ಡಾ.ಬಲಿರಾಮ ಹುಡೆ, ಡಾ.ಭೀಮಾಶಂಕರ ಬಿರಾದಾರ, ಡಾ.ಚಿತ್ರಶೇಖರ ಚಿರಳ್ಳಿ, ಡಾ.ಚಂದ್ರಕಾಂತ ಗಾಯಕವಾಡ, ಡಾ.ಶ್ರೀಕಾಂತ ಚವ್ಹಾಣ್, ಡಾ.ಪೀರಪ್ಪ ಸಜ್ಜನ್, ಸುದರ್ಶನಾ, ಶ್ರೀದೇವಿ ಚೌಧರಿ, ಡಾ.ಅಂಜಲಿ ಇದ್ದರು.
Published on

ಬಸವಕಲ್ಯಾಣ: ಬದುಕುವ ಕಲೆ ಅರಿತಿದ್ದ ಜನಪದರ ಸರಳ ಮತ್ತು ಅನುಭವದಿಂದ ಕೂಡಿದ ಜೀವನದ ಸತ್ವ ತಿಳಿಯುವ ಅಗತ್ಯವಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವ-೨೦೨೫ ಉದ್ಘಾಟಿಸಿದ ಅವರು, ನೆಮ್ಮದಿ, ಘನತೆಯ ಬದುಕಿನ ಸೂತ್ರಗಳನ್ನು ಜನಪದರು ಜಾನಪದದ ಮೂಲಕ ಕಟ್ಟಿಕೊಟ್ಟಿದ್ದಾರೆ. ಜೀವನ ಸತ್ವ ಹಾಗೂ ಜಾನಪದ ಸಂಸ್ಕೃತಿ ಯುವ ಸಮೂಹಕ್ಕೆ ತಲುಪಿಸುವುದೇ ಈ ಉತ್ಸವದ ಆಶಯ ಎಂದರು.

ಚಿಟಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಚಿತ್ರಶೇಖರ ಚಿರಳ್ಳಿ ಮಾತನಾಡಿ, ಹಿರಿಯರ ಜೀವನ ಕ್ರಮವೇ ಜಾನಪದ. ಹಬ್ಬ-ಹರಿದಿನ, ಜಾತ್ರೋತ್ಸವ ಸೇರಿ ಇಡೀ ಜನಪದ ಸಂಸ್ಕೃತಿ ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಇಂಥ ಉತ್ಸವಗಳಿಂದ ನಡೆಯಲಿದೆ ಎಂದು ಹೇಳಿದರು.

ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಜಾನಪದ ಸಂಸ್ಕೃತಿ ಸೌಹಾರ್ದ, ಸಹಬಾಳ್ವೆಯನ್ನು ಪ್ರತಿನಿಧಿಸುತ್ತದೆ. ಉತ್ಸವಗಳು ಕಲೆ, ಸೃಜನಶೀಲತೆಯನ್ನು ಅರಳಿಸುವ ಹಾಗೂ ಮಾನವೀಯ ಸಂಬಂಧಗಳನ್ನು ಕಾಪಿಡುವ ದಾರಿಯಾಗಿವೆ. ಬಹು ಸಂಸ್ಕೃತಿಯ ಮೇಳೈಕೆ ಉತ್ಸವಗಳ ಚಹರೆಯಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಬಲಿರಾಮ ಹುಡೆ ಮಾತನಾಡಿ, ಇಂದು ಒಕ್ಕಲುತನ ಮಾಡುವ ಎಲ್ಲರ ಮನೆಯಲ್ಲೂ ಜಾನಪದ ಸಂಸ್ಕೃತಿ ಜೀವಂತವಾಗಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ನಡೆಯುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಮುಖರಾದ ದೀಪಕಕುಮಾರ ಗೌಡ, ಸುಭಾಷ ಮಚಕುರೆ, ಸುದರ್ಶನಾ, ಶ್ರೀದೇವಿ ಚೌಧರಿ, ಮಹೇಶ ಮಂಠಾಳೆ, ಬಸವರಾಜ ಬಿರಾದಾರ, ಡಾ.ಅಂಜಲಿ, ಅಶ್ವಿನಿ, ಚಿನ್ನಮ್ಮ, ರೇಖಾ ಉಪಸ್ಥಿತರಿದ್ದರು. ಡಾ.ಚಂದ್ರಕಾಂತ ಗಾಯಕವಾಡ ಸ್ವಾಗತಿಸಿದರು. ಡಾ.ಶ್ರೀಕಾಂತ ಚವ್ಹಾಣ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಪೀರಪ್ಪ ಸಜ್ಜನ್ ವಂದಿಸಿದರು. ಮೀನಾಕ್ಷಿ ಬಿರಾದಾರ ನಿರೂಪಣೆ ಮಾಡಿದರು. ವಿದ್ಯಾರ್ಥಿಗಳು ಜಾನಪದ ಹಾಡುಗಳೊಂದಿಗೆ ಕಲಾ ಪ್ರದರ್ಶನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net