ಜನಪದದಿಂದ ಸೃಜನಶೀಲ ಸಮಾಜ ಸೃಷ್ಟಿ

23 NMG 03 (2)
Published on

ನಾಗಮಂಗಲ: ಜಾನಪದ ಎಂದರೆ ಕೇವಲ ಮನರಂಜನೆಯಲ್ಲ. ನಾಡಿನ ಗ್ರಾಮೀಣ ಪ್ರದೇಶದ ಮುಗ್ಧಜನರು ಪ್ರಕೃತಿಯನ್ನು ಗೆಲ್ಲಲು ಮಾಡಿಕೊಂಡಿರುವ ಅರ್ಥಪೂರ್ಣ ವ್ಯವಸ್ಥೆ ಎಂದು ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರಗೌಡ ತಿಳಿಸಿದರು.


ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ 43ನೇ ಜಾನಪದ ಕಲಾಮೇಳ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನಪದ ಎಂಬುದು ನಮ್ಮ ಮೂಲ ಜ್ಞಾನವಾಗಿದೆ. ಈ ಜ್ಞಾನವನ್ನು ಬೆಳೆಸಿಕೊಂಡು ಹೋದರೆ ಮಾತ್ರ ಸೃಜನಶೀಲ ಸಮಾಜದ ಸೃಷ್ಟಿಯಾಗುತ್ತದೆ ಎಂದರು.


ನಾಡಿಗೆ ಹಾಗೂ ರಾಷ್ಟ್ರಕ್ಕೆ ದೊಡ್ಡ ಕೊಡುಗೆಯಾಗಿರುವ ಆದಿಚುಂಚನಗಿರಿ ಮಠವು ಶಿಕ್ಷಣ, ಆರೋಗ್ಯ, ಪರಿಸರ, ಅಧ್ಯಾತ್ಮ, ಸಂಸ್ಕೃತಿ, ಕಲೆ ಇವೆಲ್ಲದರ ಸಮ್ಮಿಳಿತವಾದ ಒಂದು ಸಾಮಾಜಿಕ ಆಧ್ಯಾತ್ಮಿಕ ಚಳವಳಿಯನ್ನು ಮಾಡುತ್ತಿರುವುದರಿಂದಲೇ ಈ ದೇಶ ಮತ್ತು ನಾಡು ಶ್ರೀಮಂತಿಕೆಯಿಂದ ಕೂಡಿದೆ ಎಂದು ಶ್ರೀಮಠದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಜಯ್‌ನಾಗಭೂಷಣ್ ಮಾತನಾಡಿ, ಯಾವುದೇ ಸಮಾಜದಲ್ಲಿ ನಾವು ಆರ್ಥಿಕ ಸದೃಢತೆ ಹೊಂದಿದರೆ ಜೀವನವೂ ಸಹ ಸದೃಢವಾಗುತ್ತದೆ. ನಮ್ಮ ಮೂಲ ಸಂಸ್ಕೃತಿಯಾದ ಜನಪದವನ್ನು ಬೆಳೆಸಿ ಉಳಿಸಿಕೊಂಡರೆ ಮಾತ್ರ ಲಕ್ಷಾಂತರ ಜನಪದರ ಬದುಕು ಸುಂದರವಾಗುತ್ತದೆ. ಈ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಶ್ರೀಮಠಕ್ಕೆ ಆಹ್ವಾನಿಸಿ ಅವರನ್ನು ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಜಗತ್ತಿನ ಎಲ್ಲ ಸಂಸ್ಕೃತಿಗಳ ತಾಯಿ ಜನಪದ. ಈ ಜಗತ್ತಿನಲ್ಲಿ ಯಾವುದಾದರೊಂದು ದೊಡ್ಡ ಸಂಸ್ಕೃತಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದಾದರೆ ಅದರ ಮೂಲ ಜನಪದವೇ ಹೊರತು ಬೇರ‌್ಯಾವುದೂ ಅಲ್ಲ. ಅದಕ್ಕಾಗಿಯೇ ಭೈರವೈಕ್ಯ ಶ್ರೀಗಳ ಆಶಯದಂತೆ ಜನಪದ ಕಲೆ, ಸಾಹಿತ್ಯವನ್ನು ರಕ್ಷಿಸಿ, ಉಳಿಸಿ ಬೆಳೆಸುವ ಜತೆಗೆ ಜನಪದ ಕಲಾವಿದರ ಬದುಕು ಹಸನಗೊಳಿಸುವ ಸದುದ್ದೇಶದಿಂದ ರಾಜ್ಯ ಮಟ್ಟದ ಶ್ರೀಕಾಲಭೈರವೇಶ್ವರ ಜಾನಪದ ಕಲಾಮೇಳ ನಡೆಸಲಾಗುತ್ತಿದೆ ಎಂದು ಹೇಳಿದರು.


ಸಮಾರಂಭದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿವಿಧ ಶಾಖಾ ಮಠಗಳ ಶ್ರೀಗಳಾದ ಸೋಮೇಶ್ವರನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಕಾರವಾರ ಜಿಲ್ಲೆಯ ಶಾಸಕಿ ರೂಪಾಲಿ ನಾಯಕ್, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಅಜಯ್‌ನಾಗಭೂಷಣ್, ನಿರ್ಮಾಪಕ ಕೃಷ್ಣಪ್ಪ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶೇಖರ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಂ, ಬಿಜಿಎಸ್ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಂ ಸೇರಿದಂತೆ ಹಲವರಿದ್ದರು.
ಜಾನಪದ ಕಲಾಮೇಳ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಜಾನಪದ ಕಲಾವಿದರು ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net