

ಚಿಕ್ಕೋಡಿ: ಜನಪದ ಸಾಹಿತ್ಯದಲ್ಲಿ ಮನುಷ್ಯನ ಬದುಕಿನ ಪಾಠ ಅಡಗಿದೆ. ಮನುಷ್ಯನ ಅರಿವು ವಿಸ್ತರಿಸಲು ಈ ಸಾಹಿತ್ಯ ಪೂರಕವಾಗಿದೆ ಎಂದು ಜಾನಪದ ಕಲಾವಿದ ಸಿದ್ದಪ್ಪ ಧನಗೊಂಡ ಹೇಳಿದರು.
ಇಲ್ಲಿನ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಶಿಕ್ಷಣದಲ್ಲಿ ಜನಪದ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸುವುದು' ಎಂಬ ವಿಷಯದ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು. ನಮ್ಮ ಪೂರ್ವಜರು ಜನಪದ ಸಾಹಿತ್ಯದ ಮೂಲಕ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿಗಳು ಜನಪದ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಡಾ.ಕನಕಾಚಲ ಕನಕಗಿರಿ ಮಾತನಾಡಿ, ಇಂದಿನ ದಿನಮಾನದಲ್ಲಿ ವ್ಯಕ್ತಿಗೆ ಸಾಧನೆಗಿಂತ ಬದುಕಿನ ಮೌಲ್ಯದ ಶಿಕ್ಷಣದ ಅಗತ್ಯವಿದೆ. ಶಿಕ್ಷಣವು ಉತ್ತಮ ಮೌಲ್ಯಗಳ ಮೂಲಕ ಕೌಶಲ ಆಧಾರಿತ ಜೀವನಕ್ಕೆ ಆದ್ಯತೆ ನೀಡು ವಂತಿರಬೇಕು ಎಂದರು.
ಪ್ರಶಿಕ್ಷಣಾರ್ಥಿಗಳಾದ ಸ್ವಾತಿ ಕೋಳಿ, ಪ್ರಿಯಾಂಕ ಚೌಗುಲೆ, ಪ್ರೇಮ ಮರಡಿ ಅನಿಸಿಕೆ ವ್ಯಕ್ತಪಡಿಸಿದರು. ಪ್ರಾಧ್ಯಾಪಕರಾದ ಎಸ್.ಎಂ.ಚಂದ್ಗಡೆ, ಚೌಸನ್ ನರ್ಸರಿ ಶಾಲೆಯ ಶಿಕ್ಷಕರಾದ ಕವಿತಾ ಹರಕೆ, ಆಸ್ಮಾ ಜಮಾದಾರ, ಉಜ್ವಲ ಮಾನೆ, ಎಂ.ಎಚ್.ರಾವುತ, ಪ್ರಶಾಂತ ಪತ್ತಾರ, ಕೃಷ್ಣ ಅರಗೆ ಇತರರು ಇದ್ದರು. ಡಾ.ಎನ್.ಎಸ್.ಶಿಂಧೆ ಸ್ವಾಗತಿಸಿದರು. ಕೀರ್ತಿ ಖೊತ ಹಾಗೂ ಆರತಿ ತಳವಾರ ನಿರೂಪಿಸಿದರು. ರೂಪಾಲಿ ದಿವಟೆ ವಂದಿಸಿದರು.